ದಕ್ಷಿಣ ಭಾರತ ರಾಜ್ಯದ ರಾಜ್ಯಪಾಲರೊಬ್ಬರಿಂದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ, ತನಿಖೆ ಆರಂಭ

ದಕ್ಷಿಣ ಭಾರತದ ರಾಜ್ಯಪಾಲರೊಬ್ಬರ ವಿರುದ್ಧ ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪ ಕೇಳಿಬಂದಿದ್ದು, ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ಕೇಂದ್ರ ಸರ್ಕಾರ ಆದೇಶಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ದಕ್ಷಿಣ ಭಾರತದ ರಾಜ್ಯಪಾಲರೊಬ್ಬರ ವಿರುದ್ಧ ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪ ಕೇಳಿಬಂದಿದ್ದು, ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ಕೇಂದ್ರ ಸರ್ಕಾರ ಆದೇಶಿಸಿದೆ.
ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿರುವಂತೆ ರಾಜಭವನದ ಮಹಿಳಾ ಉದ್ಯೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಕುರಿತಂತೆ ಗೃಹ ಸಚಿವಾಲಯದಲ್ಲಿ ದೂರು ದಾಖಲಾಗಿದ್ದು, ಈ ಸಂಬಂಧ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿದೆ. ಕೇಂದ್ರ ಗೃಹ ಸಚಿವಾಲಯ ಈ ಆರೋಪ ಸಂಬಂಧ ಖುದ್ಧ ಗೌಪ್ಯ ತನಿಖೆಗೆ ಆದೇಶಿಸಿದ್ದು, ಆರೋಪಿತ ರಾಜ್ಯಪಾಲ ಮತ್ತು ಆರೋಪ ಮಾಡಿರುವ ಮಹಿಳಾ ಸಿಬ್ಬಂದಿಯ ಹೆಸರು ಯಾವುದೇ ಕಾರಣಕ್ಕೂ ಹೊರಗೆ ಬರದಂತೆ ಗೌಪ್ಯತೆ ಕಾಪಾಡಿಕೊಳ್ಳಲಾಗುತ್ತಿದೆ.
ಈ ಪ್ರಕರಣದ ಕುರಿತು ಕಳೆದ ಮೂರು ದಿನಗಳಿಂದಲೇ ಸುದ್ದಿ ಪ್ರಸಾರವಾಗುತ್ತಿದೆಯಾದರೂ ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ರೀತಿಯ ಮಾಹಿತಿ ನೀಡುತ್ತಿಲ್ಲ. ಆರೋಪಕ್ಕೀಡಾಗಿರುವ ರಾಜ್ಯಪಾಲರು ಯಾರು ಎಂಬುದು ಇನ್ನೂ ನಿಗೂಢವಾಗಿದ್ದು, ಯಾವುದೋ ಕೆಲಸ ಮಾಡಿಕೊಡುವ ಸಲುವಾಗಿ ರಾಜ್ಯಪಾಲರು ಮಹಿಳಾ ಉದ್ಯೋಗಿಯಿಂದ ಲೈಂಗಿಕ ಸಹಕಾರ ಕೇಳಿದರು ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆಯಂತೆ. ಸದ್ಯ ಈ ದೂರಿನ ವಿಚಾರಣೆ ಪ್ರಗತಿಯಲ್ಲಿದ್ದು, ಸಚಿವಾಲಯದಿಂದಲೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಸಾಕ್ಷ್ಯ ಸಂಗ್ರಹಕ್ಕೆ ಸೂಚನೆ
ಮೂಲಗಳ ಪ್ರಕಾರ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಸಚಿವಾಲಯ ಈ ಕುರಿತ ಸಾಕ್ಷ್ಯಗಳಿದ್ದಲ್ಲಿ ಕಲೆಹಾಕುವಂತೆ ತನಿಖಾ ಸಂಸ್ಥೆಗಳಿಗೆ ಸೂಚಿಸಿದೆ. ಒಂದೊಮ್ಮೆ ದೂರಿನಲ್ಲಿ ಉಲ್ಲೇಖಿಸಲ್ಪಟ್ಟ ಆರೋಪಕ್ಕೆ ಸಾಕ್ಷ್ಯಗಳು ಸಿಕ್ಕಿದಲ್ಲಿ ಆರೋಪಿ ರಾಜ್ಯಪಾಲರು ರಾಜೀನಾಮೆ ಕೊಡುವ ಪರಿಸ್ಥಿತಿ ಎದುರಾದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಈ ಹಿಂದೆ, ಮೇಘಾಲಯದ ರಾಜ್ಯಪಾಲರಾಗಿದ್ದ ವಿ.ಷಣ್ಮುಗನಾಥನ್ ವಿರುದ್ಧ ಹಗರಣದಲ್ಲಿ ಭಾಗಿಯಾದ ಆರೋಪ ಎದುರಾದಾಗ ಇಂಥದ್ದೇ ಪ್ರಕ್ರಿಯೆಯನ್ನು ಸಚಿವಾಲಯ ನಡೆಸಿತ್ತು. ಕೊನೆಗೆ ರಾಜೀನಾಮೆ ನೀಡುವಂತೆ ಅವರಿಗೆ ಸೂಚಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com