ತೀರ್ಪು ಪ್ರಕಟಿಸುವಾಗ ನ್ಯಾಯಾಧೀಶರು ಎಚ್ಚರಿಕೆ ವಹಿಸಬೇಕು: ಸುಪ್ರೀಂ ಕೋರ್ಟ್

ನ್ಯಾಯಾಲಗಳು ತಮ್ಮ ತೀರ್ಪು ಪ್ರಕಟಿಸುವಾಗ ನ್ಯಾಯಾಧೀಶರು ಎಚ್ಚರಿಕೆ ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವಹಲಿ: ನ್ಯಾಯಾಲಗಳು ತಮ್ಮ ತೀರ್ಪು ಪ್ರಕಟಿಸುವಾಗ ನ್ಯಾಯಾಧೀಶರು ಎಚ್ಚರಿಕೆ ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಜಾತಿ ನಿಂದನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸೋಮವಾರ ತನ್ನ ತೀರ್ಪಿನಲ್ಲಿ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, "ನ್ಯಾಯಾಲಯಗಳು ತೀರ್ಪು ನೀಡುವಾಗ ನಿಷ್ಪಕ್ಷಪಾತ ನಿಲುವನ್ನು ತಳೆಯುವ ಸಂಪ್ರದಾಯವಿದೆ. ಇದನ್ನು ಪಾಲಿಸಿ ನ್ಯಾಯತೀರ್ಮಾನದ ಸಂದರ್ಭ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. 
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎನ್.ವಿ.ರಮಣ ಮತ್ತು ಎಸ್.ಅಬ್ದುಲ್ ನಜೀರ್ ಅವರನ್ನೊಳಗೊಂಡ ನ್ಯಾಯಪೀಠ, ''ನ್ಯಾಯವನ್ನು ನೀಡುವುದು ಮಾತ್ರವಲ್ಲ ಅದು ಪ್ರಕಟವಾಗಬೇಕು ಅಥವಾ ನ್ಯಾಯ ನೀಡಿರುವುದು ಗೋಚರಕ್ಕೆ ಬರಬೇಕು. ತೀರ್ಪು ಪ್ರಕಟಿಸುವಾಗ ನ್ಯಾಯಾಧೀಶರು ಸ್ವತಂತ್ರ ವಾಗಿ ಆಲೋಚಿಸಿ, ವಿವೇಕವನ್ನು ಬಳಸಿಕೊಂಡು ಸಮಯ ಸಂದರ್ಭವನ್ನು ಪರಿಗಣಿಸುವ ಸಂಪ್ರದಾಯವನ್ನು ನಮ್ಮ ನ್ಯಾಯಾಲಯಗಳು ಹೊಂದಿವೆ. ಈ ಸಂಪ್ರದಾಯವನ್ನು ಪಾಲಿಸಬೇಕು ಮತ್ತು ನೀಡುವ ತೀರ್ಪಿನಲ್ಲಿ ನ್ಯಾಯ ಗೋಚರಿಸಬೇಕು ಎಂದು ಸುಪ್ರೀಂಕೋರ್ಟ್ ದ್ವಿ ಸದಸ್ಯ ಪೀಠ ತಿಳಿಸಿದೆ.
ಅಂತೆಯೇ "ಆದರೆ ದುರದೃಷ್ಟವಶಾತ್, ದೇಶದಾದ್ಯಂತದ ನ್ಯಾಯಾಲಯಗಳಲ್ಲಿ ಕೆಲವೊಮ್ಮೆ ಪ್ರಕಟವಾಗುವ ತೀರ್ಪು ಇದಕ್ಕೆ ವ್ಯತಿರಿಕ್ತವಾಗಿರುತ್ತದೆ.  ಅಪರಾಧ ಪ್ರಕರಣಗಳ ವಿಚಾರಣೆ ಸಂದರ್ಭ ಮುಕ್ತ ಮತ್ತು ನಿಷ್ಪಕ್ಷಪಾತ ನಿಲುವನ್ನು ತಳೆಯುವ ಸಂಪ್ರದಾಯ ನಮ್ಮ ಸಾಂವಿಧಾನಿಕ ವ್ಯವಸ್ಥೆಯ ಭಾಗವಾಗಿದೆ. ವ್ಯಕ್ತಿಯ ಹಕ್ಕು, ಹಿತಾಸಕ್ತಿ ಹಾಗೂ ನ್ಯಾಯಸಮ್ಮತ ನಿರೀಕ್ಷೆಗಳ ಮೇಲೆ ಪರಿಣಾಮ ಬೀರುವ ನಿರ್ಧಾರಗಳನ್ನು ಪ್ರಕಟಿಸುವಾಗ ವಿವೇಕವನ್ನು ಬಳಸಿಕೊಳ್ಳಬೇಕು ಎಂದು ನ್ಯಾಯಪೀಠ ಹೇಳಿದೆ.
ಏನಿದು ಪ್ರಕರಣ?
ತನಗೆ ಸೇರಿದ ಜಮೀನಿನ ಒಂದು ಭಾಗವನ್ನು ಅಕ್ರಮವಾಗಿ ಮತ್ತೊಬ್ಬರ ಹೆಸರಿಗೆ ಪರಿವರ್ತಿಸಲಾಗಿದೆ ಮತ್ತು ಈ ಬಗ್ಗೆ ವಿಚಾರಿಸಲು ಹೋದಾಗ ತನ್ನನ್ನು ಜಾತಿನಿಂದನೆ ಮಾಡಲಾಗಿದೆ ಎಂದು ಮಧ್ಯಪ್ರದೇಶದ ನಿವಾಸಿ, ಪರಿಶಿಷ್ಟ ಜಾತಿಯ ವ್ಯಕ್ತಿಯೋರ್ವ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದೂರು ದಾಖಲಿಸಿದ್ದ. ವಿಚಾರಣೆ ನಡೆಸಿದ್ದ ಗ್ವಾಲಿಯರ್‌ನ ಜುಡಿಷಿಯಲ್ ನ್ಯಾಯಾಲಯ, ಕ್ರಿಮಿನಲ್ ದೂರನ್ನು ವಜಾಗೊಳಿಸಿತ್ತು. ದೂರುದಾರರು ಪರಿಶಿಷ್ಟ ಜಾತಿಗೆ ಸೇರಿದವರೆಂದು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿಲ್ಲ ಮತ್ತು ಈ ವಿವಾದ ಸಿವಿಲ್ ಪ್ರಕರಣವಾಗಿದೆ ಎಂದು ನ್ಯಾಯಾಲಯ ತಿಳಿಸಿತ್ತು.
ಈ ತೀರ್ಪನ್ನು ಸೆಷನ್ಸ್ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಈ ಸಂದರ್ಭ ದೂರುದಾರನ ಪರ ತೀರ್ಪು ನೀಡಿದ್ದ ಸೆಷನ್ಸ್ ಕೋರ್ಟ್, ಪ್ರಕರಣದ ಮರುವಿಚಾರಣೆ ನಡೆಸುವಂತೆ ಸೂಚಿಸಿ ವಿಚಾರಣಾ ನ್ಯಾಯಾಲಯಕ್ಕೆ ಮರಳಿಸಿತ್ತು. ಈ ಹಿನ್ನೆಲೆಯಲ್ಲಿ ದೂರನ್ನು ಪರಿಗಣಿಸಿದ ನ್ಯಾಯಾಧೀಶರು 2013ರ ಜನವರಿ 23ರಂದು ದೂರು ದಾಖಲಿಸಿಕೊಂಡಿದ್ದರು. ಈ ಮಧ್ಯೆ ಹೈಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆಗೆ ಬಂದಾಗ ಸೆಷನ್ಸ್ ಕೋರ್ಟ್‌ನ ತೀರ್ಪನ್ನು ರದ್ದುಪಡಿಸಲಾಗಿತ್ತು. 
ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಯಿತು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ನ್ಯಾಯಪೀಠವು, ಮಧ್ಯಪ್ರದೇಶ ಹೈಕೋರ್ಟ್‌ನ ತೀರ್ಪನ್ನು ರದ್ದುಗೊಳಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com