ನಿನ್ನೆಯಷ್ಟೇ ಅಗ್ನಿ ದುರಂತ ಪ್ರಕರಣದ ತನಿಖಾಧಿಕಾರಿಗಳು ಮುಂಬೈ ಮಹಾನಗರ ಪಾಲಿಕೆ ಆಯುಕ್ತರಿಗೆ ಅಗ್ನಿ ದುರಂತದ ವರದಿ ನೀಡಿದ್ದರು. ವರದಿಯಲ್ಲಿ ಅಗ್ನಿ ದುರಂತಕ್ಕೆ ರೂಫ್ ಟಾಪ್ ಪಬ್ ಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಹುಕ್ಕಾಗಳು ಕಾರಣವಾಗಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಅಂತೆಯೇ ಅಗ್ನಿ ದುರಂತಕ್ಕೆ ಒಳಪಟ್ಟ ರೂಫ್ ಟಾಪ್ ಪಬ್ ಗಳಾದ ಮೋಜೋಸ್ ಬಿಸ್ಟ್ರೋ ಮತ್ತು 1 ಅಬೋವ್ ಪಬ್ ಗಳೆರಡೂ ಪಾಲಿಕೆ ನಿಯಮವನ್ನು ಗಾಳಿಗೆ ತೂರಿ ಅಕ್ರಮವಾಗಿ ಅನುಮತಿ ಇಲ್ಲದೇ ಹುಕ್ಕಾ ಬಾರ್ ಗಳನ್ನು ನಡೆಸುತ್ತಿದ್ದವು. ಆದರೆ ಈ ಬಗ್ಗೆ ಯಾವುದೇ ರೀತಿಯ ಸುರಕ್ಷತಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ಅಧಿಕಾರಿಗಳು ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ ಎಂದು ತಿಳಿದುಬಂದಿದೆ.