ತಂಟೆಕೋರ ಪಾಕ್, ಚೀನಾಗೆ ಭಾರತ ಟಾಂಗ್; ಗಡಿಗಳಲ್ಲಿ 14 ಸಾವಿರ ಬಂಕರ್ ನಿರ್ಮಾಣ!

ಪದೇ ಪದೇ ಗಡಿಯಲ್ಲಿ ತಂಟೆ ಮಾಡುತ್ತಿರುವ ಚೀನಾ ಮತ್ತು ಪಾಕಿಸ್ತಾನ ದೇಶಗಳಿಗೆ ಟಾಂಗ್ ನೀಡುವ ನಿಟ್ಟಿನಲ್ಲಿ ಉಭಯ ದೇಶಗಳ ಗಡಿಯಲ್ಲಿ ಸುಮಾರು 14 ಸಾವಿರ ಸುಸಜ್ಜಿತ ಬಂಕರ್ ಗಳ ನಿರ್ಮಾಣಕ್ಕೆ ಭಾರತ ಸರ್ಕಾರ ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪದೇ ಪದೇ ಗಡಿಯಲ್ಲಿ ತಂಟೆ ಮಾಡುತ್ತಿರುವ ಚೀನಾ ಮತ್ತು ಪಾಕಿಸ್ತಾನ ದೇಶಗಳಿಗೆ ಟಾಂಗ್ ನೀಡುವ ನಿಟ್ಟಿನಲ್ಲಿ ಉಭಯ ದೇಶಗಳ ಗಡಿಯಲ್ಲಿ ಸುಮಾರು 14 ಸಾವಿರ ಸುಸಜ್ಜಿತ ಬಂಕರ್ ಗಳ ನಿರ್ಮಾಣಕ್ಕೆ ಭಾರತ  ಸರ್ಕಾರ ಮುಂದಾಗಿದೆ.
ಭಾರತೀಯ ಗಡಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಪಾಕಿಸ್ತಾನ ಸೇನೆ ನಡೆಸುವ ಶೆಲ್ ಮತ್ತು ಗುಂಡಿನ ದಾಳಿಯಿಂದ ಸ್ಥಳೀಯ ಜನರಿಗೆ ರಕ್ಷಣೆ ಒದಗಿಸುವ ಸಲುವಾಗಿ ನಿಯಂತ್ರಣ ರೇಖೆ ಮತ್ತು  ಅಂತಾರಾಷ್ಟ್ರೀಯ ಗಡಿಯಲ್ಲಿ 14,000 ಪ್ರತ್ಯೇಕ ಮತ್ತು ಸಮುದಾಯ ಬಂಕರ್‌ ಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಅದರಂತೆ ಅವಳಿ ಜಿಲ್ಲೆಗಳಾದ ಕಾಶ್ಮೀರದ ಪೂಂಚ್ ಮತ್ತು ರಜೌರಿ ಜಿಲ್ಲೆಯಲ್ಲಿ 7,298 ಬಂಕರ್‌ ಗಳನ್ನು ನಿರ್ಮಿಸಿದರೆ 7,162 ಬಂಕರ್‌ ಗಳನ್ನು ಜಮ್ಮು, ಕತುವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿರುವ ಅಂತಾರಾಷ್ಟ್ರೀಯ ಗಡಿಯ ಬಳಿ  ಭೂಮಿಯೊಳಗಡೆ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಒಟ್ಟು 14,460 ಬಂಕರ್‌ಗಳ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಒಟ್ಟು ರೂ. 415.73 ಕೋಟಿ ಮಂಜೂರು ಮಾಡಿದೆ ಎಂದು  ಹೇಳಲಾಗುತ್ತಿದೆ.
ಅಧಿಕಾರಿಗಳು ನೀಡಿರುವ ಮಾಹಿತಿ ಅನ್ವಯ ಪ್ರತೀಯೊಂದು ಬಂಕರ್ ನಲ್ಲೂ ಸುಮಾರು ಎಂಟು ಸೈನಿಕರ ಸಾಮರ್ಥ್ಯದ 160 ಚದರ ಅಡಿಗಳ 13,029 ಪ್ರತ್ಯೇಕ ಬಂಕರ್‌ ಗಳು ಮತ್ತು 40 ಜನರ ಸಾಮರ್ಥ್ಯದ 800 ಚದರ  ಅಡಿಗಳ 1431 ಸಮುದಾಯ ಬಂಕರ್‌ ಗಳನ್ನು ನಿರ್ಮಿಸಲಾಗುವುದು ಎನ್ನಲಾಗಿದೆ. ಅಂತೆಯೇ ಈ ಪೈಕಿ ರಜೌರಿಯಲ್ಲಿ 4918 ಪ್ರತ್ಯೇಕ ಮತ್ತು 372 ಸಮುದಾಯ ಬಂಕರ್‌ ಗಳು, ಕತುವಾದಲ್ಲಿ 3076 ಪ್ರತ್ಯೇಕ ಮತ್ತು 243  ಸಮುದಾಯ ಬಂಕರ್‌ಗಳು, ಪೂಂಚ್‌ನಲ್ಲಿ 1320 ಪ್ರತ್ಯೇಕ ಮತ್ತು 688 ಸಮುದಾಯ ಬಂಕರ್‌ ಗಳು, ಜಮ್ಮುವಿನಲ್ಲಿ 1200 ಪ್ರತ್ಯೇಕ ಮತ್ತು 120 ಸಮುದಾಯ ಹಾಗೂ ಸಾಂಬಾದಲ್ಲಿ 2515 ಪ್ರತ್ಯೇಕ ಮತ್ತು ಎಂಟು  ಸಮುದಾಯ ಬಂಕರ್‌ ಗಳನ್ನು ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಪ್ರಸ್ತುತ ಭಾರತ ನೆರೆಯ ಪಾಕಿಸ್ತಾನದೊಂದಿಗೆ ಸುಮಾರು 3,323 ಕಿ.ಮೀ ಗಡಿಯನ್ನು ಹಂಚಿಕೊಂಡಿದೆ. ಈ ಪೈಕಿ ಅಂತಾರಾಷ್ಟ್ರೀಯ ಗಡಿಯ 221 ಕಿ.ಮೀ ಮತ್ತು ನಿಯಂತ್ರಣ ರೇಖೆಯ 740 ಕಿ.ಮೀ ಜಮ್ಮು ಮತ್ತು ಕಾಶ್ಮೀರ  ಗಡಿಯಲ್ಲಿದೆ. 
ಇನ್ನು ಕಳೆದ ವರ್ಷ ಪಾಕಿಸ್ತಾನ ನಡೆಸಿದ ಕದನ ವಿರಾಮ ಉಲ್ಲಂಘನೆಯಲ್ಲಿ  19 ಭಾರತೀಯ ಸೈನಿಕರು 12 ಮಂದಿ ಸ್ಥಳೀಯ ನಾಗರಿಕರು ಮತ್ತು 4 ಬಿಎಸ್‌ಎಫ್ ಸಿಬ್ಬಂದಿ ಸೇರಿ ಒಟ್ಟು 35 ಮಂದಿ ಸಾವನ್ನಪ್ಪಿದ್ದರು. ಈಗಲೂ  ಪಾಕಿಸ್ತಾನ ಸೈನಿಕರು ಗಡಿಯಲ್ಲಿ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದು, ಭಾರತೀಯ ಸೇನೆ ಕೂಡ ದಿಟ್ಟ ಉತ್ತರ ನೀಡುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com