ನವದೆಹಲಿ: ಹೊಸ ವರ್ಷದಂದು ಲಂಡನ್–ಮುಂಬೈ ವಿಮಾನ ಯಾನದ ಮಾರ್ಗ ಮಧ್ಯೆ ಕಾಕ್ ಪಿಟ್ ನಲ್ಲೇ ಕಿತ್ತಾಡಿಕೊಂಡಿದ್ದ ಜೆಟ್ ಏರ್ ವೇಸ್ ನ ಇಬ್ಬರು ಹಿರಿಯ ಪೈಲೆಟ್‌ಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಜನವರಿ 1ರಂದು 9ಡಬ್ಲ್ಯು119 ಲಂಡನ್–ಮುಂಬೈ ವಿಮಾನದಲ್ಲಿ ಸೇವೆಯಲ್ಲಿದ್ದ ಹಿರಿಯ ಪೈಲೆಟ್ ಹಾಗೂ ಮಹಿಳಾ ಕಮಾಂಡರ್ ನಡುವೆ ಮಾತಿಗೆ ಮಾತು ಬೆಳೆದು ಆಕೆಯ ಕೆನ್ನೆಗೆ ಹೊಡೆದಿದ್ದರು. ಕಣ್ಣೀರು ಹಾಕುತ್ತ ಆಕೆ ಕಾಕ್ ಪಿಟ್ ನಿಂದ ಹೊರಬಂದಿದ್ದರು.
ಪ್ರಯಾಣಿಕರ ಸುರಕ್ಷತೆಗೆ ಹಾನಿಯಾಗಬಹುದಾಗಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ಕಾಕ್‌ಪಿಟ್ ಸಿಬ್ಬಂದಿಯನ್ನು ವಜಾಗೊಳಿಸಿರುವುದಾಗಿ ಜೆಟ್ ಏರ್ ವೇಸ್ ನ ವಕ್ತಾರರು ಇಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಪ್ಪು ಗ್ರಹಿಕೆಯಿಂದಾಗಿ ಇಬ್ಬರು ಪೈಲೆಟ್‌ಗಳ ನಡುವೆ ಜಗಳ ನಡೆದಿದ್ದು, ಅದನ್ನು ನಂತರ ಮಾತುಕತೆ ಮೂಲಕ ಪರಿಹರಿಸಿಕೊಳ್ಳಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.