ರತ್ನಪ್ರಭಾ
ದೇಶ
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಮೆಚ್ಚುಗೆ ವ್ಯಕ್ತಪಡಿಸಿದ್ದು,...
ನವದೆಹಲಿ: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಂತಹ ಅಧಿಕಾರಿಗಳು ನಮ್ಮ ದೇಶಕ್ಕೆ ಬೇಕಾಗಿದೆ ಎಂದಿದ್ದಾರೆ.
ಇಂದು ಪಿಐಒ-ಪಾರ್ಲಿಮೆಂಟರಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ರತ್ನಪ್ರಭಾ ಅವರು 27 ವರ್ಷಗಳ ಹಿಂದೆ ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ, ಅವರು ಕಾರಿನಲ್ಲಿ ಹೋಗುತ್ತಿದ್ದಾಗ ಕುರಿ ಕಾಯುತ್ತಿದ್ದ ಬಾಲಕನನ್ನು ಕರೆದುಕೊಂಡು ಬಂದು ಶಾಲೆಗೆ ಸೇರಿಸಿದ್ದರು. ರತ್ನಪ್ರಭಾ ಅವರ ಸಹಾಯದಿಂದ ನರಸಪ್ಪ ಎಂಬ ಆ ಬಾಲಕ ಈಗ ವಿದ್ಯಾಭ್ಯಾಸ ಮುಗಿಸಿ ಕರ್ನಾಟಕದಲ್ಲಿ ಪೊಲೀಸ್ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದಾನೆ ಎಂಬ ಮಾಹಿತಿಯನ್ನು ಅವರು ಐದು ದಿನಗಳ ಹಿಂದೆ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ರತ್ನಪ್ರಭಾ ಅವರು ಇತರೆ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ರತ್ನಪ್ರಭಾ ಅವರು ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ವೇಳೆ ಶಾಲೆಯ ಮುಂದೆಯೇ ಬಾಲಕನೊಬ್ಬ ಕುರಿ ಕಾಯುತ್ತಿರುವುದನ್ನು ನೋಡಿದ್ದರು. ತಕ್ಷಣ ಕಾರು ನಿಲ್ಲಿಸಿ ಶಿಕ್ಷಕರನ್ನು ಕರೆದು ಆ ಹುಡುಗನನ್ನು ಶಾಲೆಗೆ ಸೇರಿಸಿಕೊಳ್ಳುವಂತೆ ಸೂಚನೆ ನೀಡಿದ್ದರು.
ಇತ್ತೀಚೆಗೆ ನರಸಪ್ಪ ಎಂಬ ಪೊಲೀಸ್ ಕಾನ್ಸ್ ಟೇಬಲ್ ವಿಧಾನಸೌಧದಲ್ಲಿರುವ ನನ್ನ ಕಚೇರಿಗೆ ಬಂದು ಸೆಲ್ಯೂಟ್ ಹೊಡೆದು, ಅಮ್ಮ ನೀವು ಅಂದು ಕುರಿಗಾಹಿಯಾಗಿದ್ದ ನನ್ನ ಶಾಲೆಗೆ ಸೇರಿಸಿದ್ದರಿಂದಲೇ ಇಂದು ನಾನು ಕಾನ್ಸ್ ಟೇಬಲ್ ಆಗಿದ್ದೇನೆ ಎಂದು ಕಥೆ ಹೇಳಿದ್ದ. ನನಗೆ ನಿಜಕ್ಕೂ ನಂಬಲಿಕ್ಕೆ ಆಗಿಲ್ಲ, ಸಣ್ಣ ಉಪಕಾರವೂ ಹೇಗೆ ಉತ್ತಮ ಪರಿಣಾಮ ಬೀರುತ್ತೆ ಎಂಬುದಕ್ಕೆ ಇದು ಸಾಕ್ಷಿ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಪ್ರಧಾನಿ ಮೋದಿವರೆಗೂ ತಲುಪಿತ್ತು.
ಆಂಧ್ರಪ್ರದೇಶ ಮೂಲದ ಕೆ ರತ್ನಪ್ರಭಾ ಅವರು 1990ರಿಂದ 1992ರ ವರೆಗೆ ರಾಯಚೂರಿನಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ವೇಳೆ ಅವರು ಮಾಡಿದ ಉತ್ತಮ ಕೆಲಸಗಳನ್ನು ಅಲ್ಲಿನ ಜನ ಇಂದಿಗೂ ನೆನಪು ಮಾಡಿಕೊಳ್ಳುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ