ಎಕ್ಸ್-ರೇ ಯಂತ್ರಗಳನ್ನು ಯಾಮಾರಿಸುವುದು ಹೇಗೆ ಎಂದು ಇಂಟರ್ ನೆಟ್ ನಲ್ಲಿ ಕಲಿತಿದ್ದ ಜೆಟ್ ಏರ್ ವೇಸ್ ಗಗನ ಸಖಿ!

ವಿಮಾನ ನಿಲ್ದಾಣದಲ್ಲಿರುವ ಅತ್ಯಾಧುನಿಕ ಎಕ್ಸ್ ರೇ ಯಂತ್ರಗಳಿಗೂ ಸಿಗದ ಹಾಗೆ ಹಣ ಕಳ್ಳಸಾಗಣೆ ಮಾಡುವುದು ಹೇಗೆ ಎಂಬ ವಿಚಾರವನ್ನು ಜೆಟ್ ಏರ್ ವೇಸ್ ಗಗನ ಸಖಿ ಇಂಟರ್ ನೆಟ್ ಮೂಲಕ ಕಲಿತಿದ್ದರು ಎಂಬ ಇದೀಗ ಬೆಳಕಿಗೆ ಬಂದಿದೆ.
ಹವಾಲಾ ಹಣ ಕಳ್ಳಸಾಗಣೆ ವೇಳೆ ಸಿಕ್ಕಿಬಿದ್ದಿದ್ದ ಜೆಟ್ ಏರ್ ವೇಸ್ ಗಗನ ಸಖಿ
ಹವಾಲಾ ಹಣ ಕಳ್ಳಸಾಗಣೆ ವೇಳೆ ಸಿಕ್ಕಿಬಿದ್ದಿದ್ದ ಜೆಟ್ ಏರ್ ವೇಸ್ ಗಗನ ಸಖಿ
ನವದೆಹಲಿ: ವಿಮಾನ ನಿಲ್ದಾಣದಲ್ಲಿರುವ ಅತ್ಯಾಧುನಿಕ ಎಕ್ಸ್ ರೇ ಯಂತ್ರಗಳಿಗೂ ಸಿಗದ ಹಾಗೆ ಹಣ ಕಳ್ಳಸಾಗಣೆ ಮಾಡುವುದು ಹೇಗೆ ಎಂಬ ವಿಚಾರವನ್ನು ಜೆಟ್ ಏರ್ ವೇಸ್ ಗಗನ ಸಖಿ ಇಂಟರ್ ನೆಟ್ ಮೂಲಕ ಕಲಿತಿದ್ದರು ಎಂಬ ಇದೀಗ ಬೆಳಕಿಗೆ ಬಂದಿದೆ.
ನಿನ್ನೆ ಹಾಂಕಾಂಗ್ ನತ್ತ ಹೊರಡಬೇಕಿದ್ದ ವಿಮಾನದಲ್ಲಿ ಸುಮಾರು 2.31 ಕೋಟಿ ಅಕ್ರಮ ಹವಾಲಾ ಹಣವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿ ಸಿಕ್ಕಿ ಬಿದ್ದಿದ್ದ ಜೆಟ್ ಏರ್ ವೇಸ್ ನ ಗಗನ ಸಖಿ ದೇವ್ ಶಿ ಕುಲಶ್ರೇಷ್ಟ ಎಂಬಾಕೆಯನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಗಗನ ಸಖಿಗೆ ಸಂಬಂಧಿಸಿದ ಬ್ಯಾಗ್ ನಲ್ಲಿ ಸುಮಾರು 3.21 ಕೋಟಿ ಮೌಲ್ಯದ ಅಕ್ರಮ ಅಮೆರಿಕನ್‌ ಡಾಲರ್‌ ಕರೆನ್ಸಿ ಪತ್ತೆಯಾಗಿತ್ತು. 
ಇದೀಗ ಆಕೆಯನ್ನು ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ ಸ್ಫೋಟಕ ಮಾಹಿತಿಗಳು ಲಭ್ಯವಾಗಿವೆ. ವಿಚಾರಣೆ ವೇಳೆ ಆಕೆ ನೀಡಿರುವ ಮಾಹಿತಿಯಂತೆ ಆಕೆ ವಿದೇಶದಿಂದ ಚಿನ್ನವನ್ನು ತರುವ ಸಲುವಾಗಿ ಹಣವನ್ನು ಅಕ್ರಮವಾಗಿ ಸಾಗಿಸುತ್ತಿದ್ದಳಂತೆ. ತನ್ನ ಈ ಕಾರ್ಯಕ್ಕೆ ಅಮಿತ್‌ ಮಲ್ಹೋತ್ರಾ ಎಂಬಾತನ ನೆರವು ಪಡೆದಿದ್ದಳು. ಮತ್ತೊಂದು ಮೂಲದ ಪ್ರಕಾರ ಬಂಧಿತ ಅಮಿತ್ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಗಗನ ಸಖಿ ಮೂಲಕ ಆತ ಹಣವನ್ನು ಕಳ್ಳಸಾಗಣೆ ಮಾಡಿಸುತ್ತಿದ್ದನಂತೆ. ಕಳ್ಳಸಾಗಣೆ ಮಾಡಲ್ಪಡುವ ಒಟ್ಟು ಹಣದ ಶೇ.1 ರಷ್ಟು ಹಣವನ್ನು ಆಕೆಗೆ ಆತ ನೀಡಬೇಕಿತ್ತಂತೆ. ಈ ಜೋಡಿ ಕೇವಲ ಎರಡು ತಿಂಗಳ ಅವಧಿಯಲ್ಲಿ ಹಾಂಕಾಂಗ್‌ ಗೆ ಬರೊಬ್ಬರಿ 7 ಬಾರಿ ಪ್ರಯಾಣ ಮಾಡಿದ್ದು, ಈ ವೇಳೆ ಸುಮಾರು 10 ಲಕ್ಷ ಡಾಲರ್‌ ನಗದನ್ನು ಕಳ್ಳ ಸಾಗಣೆ ಮಾಡಿದ್ದರು ಎನ್ನಲಾಗಿದೆ.
ಹೀಗೆ ಕಳ್ಳ ಸಾಗಣೆ ಮಾಡಿದ ಹಣದ ಪೈಕಿ ತನಗೆ ಸಿಗುತ್ತಿದ್ದ ಹಣವನ್ನು ಆಕೆ ತನ್ನ ಪತಿಯಿಂದ ಬ್ಯಾಂಕಿಗೆ ಜಮೆ ಮಾಡಿಸುತ್ತಿದ್ದಳಂತೆ. ಗಗನ ಸಖಿಯ ಪತಿ ಉದ್ಯೋಗ ಸಂಸ್ಥೆ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಕ್ಸ್ ರೇ ಯಂತ್ರದ ಕಣ್ತಪ್ಪಿಸಲು ಇಂಟರ್ ನೆಟ್ ನೆರವು
ಇನ್ನು ಗಗನ ಸಖಿ ನಗದನ್ನು ಫಾಯಿಲ್ ಕಾಗದದೊಳಗೆ ಇರಿಸುತ್ತಿದ್ದಳು..ಈ ಫಾಯಿಲ್ ಕಾಗದ ವಿಮಾನ ನಿಲ್ದಾಣದ ಎಕ್ಸ್ ರೇ ಯಂತ್ರಕ್ಕೆ ಅಷ್ಟು ಸುಲಭವಾಗಿ ಪತ್ತೆಯಾಗುತ್ತಿರಲಿಲ್ಲ. ಈ ಬಗ್ಗೆ ಬಂಧಿತ ಗಗನ ಸಖಿ ಇಂಟರ್ ನೆಟ್ ಮೂಲಕ ತಿಳಿದುಕೊಂಡಿದ್ದಳಂತೆ. ಇದೇ ಕಾರಣಕ್ಕೆ ಹಣವನ್ನು ಫಾಯಿಲ್ ಕಾಗದೊಳಗೆ ಇರಿಸಿ ಬಳಿಕ ಅದಕ್ಕೆ ಚಾಕಲೇಟ್ ಲೇಪನ ಮಾಡಿ ಅದನ್ನು ಪ್ಯಾಕ್ ಮಾಡಿ ಅದನ್ನು ತನ್ನ ಮೇಕಪ್ ಕಿಟ್ ನೊಳಗೆ ಇರಿಸಿಕೊಂಡು ಸಾಗಟ ಮಾಡುತ್ತಿದ್ದಳು. ಎಕ್ಸ್ ರೇ ಯಂತ್ರದಲ್ಲಿ ಇದು ಕಪ್ಪು ಬಣ್ಣದ ವಸ್ತುವಾಗಿ ಗೋಚರಿಸುತ್ತಿತ್ತು. ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಇದನ್ನು ತೆಗೆದು ನೋಡದ ಹೊರತು ಇದು ಪತ್ತೆಯಾಗುತ್ತಿರಲಿಲ್ಲ. ಇದೇ ಕಾರಣಕ್ಕೆ ಈಕೆ ಇಷ್ಟು ದಿನ ಸಿಕ್ಕಿ ಬಿದ್ದಿರಲಿಲ್ಲ ಎಂದು ಅಧಿಕಾರಿಯೊಬ್ಹರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com