ಸಂಗ್ರಹ ಚಿತ್ರ
ದೇಶ
ಬಂಡಾಯ ನ್ಯಾಯಾಧೀಶರಿಗೆ ಸಿಜೆಐ ಮಿಶ್ರಾ ಟಾಂಗ್, ನೂತನ ಸಾಂವಿಧಾನಿಕ ಪೀಠ ರಚನೆ
ದೇಶದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಬಂಡಾಯ ನ್ಯಾಯಾಧೀಶರ ಹೊರತು ಪಡಿಸಿ ನೂತನ ಸಾಂವಿಧಾನಿಕ ಪೀಠ ರಚನೆ ಮಾಡಿದ್ದಾರೆ.
ನವದೆಹಲಿ: ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿನ ನ್ಯಾಯಾಂಗ ಬಿಕ್ಕಟ್ಟು ಶಮನಕ್ಕೆ ಕೇಂದ್ರ ಸರ್ಕಾರ ಹರಸಾಹಸ ಪಡುತ್ತಿದ್ದರೆ ಇತ್ತ ಸಮಸ್ಯೆ ಮತ್ತೆ ಜಟಿಲಗೊಳ್ಳುತ್ತಾ ಸಾಗುತ್ತಿದ್ದು, ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಬಂಡಾಯ ನ್ಯಾಯಾಧೀಶರ ಹೊರತು ಪಡಿಸಿ ನೂತನ ಸಾಂವಿಧಾನಿಕ ಪೀಠ ರಚನೆ ಮಾಡಿದ್ದಾರೆ.
ನ್ಯಾಯಾಧೀಶರಾದ ಎ.ಕೆ. ಸಿಕ್ರಿ, ಎಂ ಖಾನ್ವಿಲ್ಕರ್, ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರನ್ನೊಳಗೊಂಡ ನೂತನ ಸಾಂವಿಧಾನಿಕ ಪೀಠವನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ರಚನೆ ಮಾಡಿದ್ದಾರೆ. ದೇಶದ ಪ್ರಮುಖ ಪ್ರಕರಣಗಳನ್ನು ಇತ್ಯರ್ಥ ಪಡಿಸುವಲ್ಲಿ ನಿರ್ಣಾಯ ಪಾತ್ರ ವಹಿಸುವ ಸಾಂವಿಧಾನಿಕ ಪೀಠದಿಂದ ಬಂಡಾಯ ನ್ಯಾಯಾಧೀಶರಾದ ಜಸ್ತಿ ಚೆಲಾಮೇಶ್ವರ್, ರಂಜನ್ ಗೊಗೊಯಿ, ಎಂಬಿ ಲೋಕೂರ್ ಮತ್ತು ಕುರಿಯನ್ ಜೋಸೆಫ್ ಅವರನ್ನು ದೂರವಿಡಲಾಗಿದೆ. ಈ ನಾಲ್ವರೂ ಪ್ರಸ್ತುತ ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿರುವ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದು, ಇವರನ್ನೇ ಸಾಂವಿಧಾನಿಕ ಪೀಠದಿಂದ ದೂರವಿಟ್ಟಿರುವುದು ಹಲವರ ಹುಬ್ಬೇರಿಸಿದೆ. ಅಲ್ಲದೇ ಇದೇ ಕಾರಣಕ್ಕೆ ಬಂಡಾಯ ನ್ಯಾಯಾಧೀಶರೂ ಕೂಡ ಸಿಜಿಐ ದೀಪಕ್ ಮಿಶ್ರಾ ಅವರ ವಿರುದ್ಧ ಬಹಿರಂಗವಾಗಿಯೇ ಈ ಹಿಂದಿನ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.
ನಿನ್ನೆಯಷ್ಟೇ ಈ ವಿವಾದ ಸಂಬಂಧ ಸುದ್ದಿಗೋಷ್ಠಿ ನಡೆಸಿದ್ ಬಾರ್ ಕೌನ್ಸಿಲ್ ಅಫ್ ಇಂಡಿಯಾ ಬಂಡಾಯ ನ್ಯಾಯಾಧೀಶರು ಆಂತರಿಕವಾಗಿ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಹೇಳಿತ್ತು.. ಇದರ ಬೆನ್ನಲ್ಲೇ ಈ ಬೆಳವಣಿಗೆ ನ್ಯಾಯಾಂಗ ಬಿಕ್ಕಟ್ಟನ್ನು ಮತ್ತಷ್ಟು ವ್ಯಾಪಕಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

