ಜಮ್ಮು ಮತ್ತು ಕಾಶ್ಮೀರ: ಜಮ್ಮುವಿನ ಅಂತಾರಾಷ್ಟ್ರೀಯ ಗಡಿರೇಖೆ ಆರ್ ಎಸ್ ಪುರ ಸೆಕ್ಟರ್ ನಲ್ಲಿ ಪಾಕಿಸ್ತಾನ ಯೋಧರು ಮತ್ತೆ ಕದನ ವಿರಾಮ ಉಲ್ಲಂಘಿಸಿದ್ದು,ಭಾರತೀಯ ಯೋಧರ ಮೇಲೆ ಗುಂಡು ಹಾಗೂ ಶೆಲ್ ದಾಳಿ ನಡೆಸಿದ್ದಾರೆ. ದಾಳಿಯಿಂದಾಗಿ ಗಡಿ ಭದ್ರತಾ ಪಡೆಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಭಾರತೀಯ ಯೋಧರು ಕೂಡಾ ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ಜಮ್ಮುವಿನ ಹೆಚ್ಚುವರಿ ಉಪ ಆಯುಕ್ತ ಅರುಣ್ ಮನ್ಹಾಸ್ ತಿಳಿಸಿದ್ದಾರೆ. ಅತಿಯಾದ ಶೆಲ್ ದಾಳಿಯಿಂದಾಗಿ ಬಿಎಸ್ ಎಫ್ ಯೋಧ ಸುರೇಶ್ ಹುತಾತ್ಮರಾಗಿದ್ದಾರೆ.
ಇವರು ತಮಿಳುನಾಡು ಮೂಲದವರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.ಗಡಿ ಪ್ರದೇಶವಾದ ಆರ್ ಎಸ್ ಪುರ ಸೆಕ್ಟರ್ ನಲ್ಲಿ ನಿನ್ನೆಯಿಂದಲೂ ಗುಂಡು ಹಾಗೂ ಶೆಲ್ ದಾಳಿ ನಡೆಯುತ್ತಲೇ ಇದೆ. ಅರ್ನಿಯಾ ಪ್ರದೇಶದಲ್ಲಿ ಪಾಕಿಸ್ತಾನ ಯೋಧರು ಅಡಗಿಕೊಂಡು ಶೆಲ್ ದಾಳಿ ನಡೆಸುತ್ತಿದ್ದಾರೆ. ಇದರಿಂದಾಗಿ ಸುತ್ತಮುತ್ತಲಿನ ಅನೇಕ ಹಳ್ಳಿಗಳು ತೀವ್ರ ರೀತಿಯ ತೊಂದರೆ ಎದುರಿಸುವಂತಾಗಿದೆ.
ಪಾಕಿಸ್ತಾನದಿಂದ ಪದೇ ಪದೇ ಕದನ ವಿರಾಮ ಉಲ್ಲಂಘನೆಯಾಗುತ್ತಲೇ ಇದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ಅರುಣ್ ಮನ್ಹಾಸ್ ತಿಳಿಸಿದ್ದಾರೆ.