ನವದೆಹಲಿ: ಲಾಭದಾಯಕ ಹುದ್ದೆ ಹೊಂದಿದ್ದಾರೆ ಎಂಬ ಆರೋಪದ ಮೇಲೆ ದೆಹಲಿ ಆಡಳಿತರೂಢ ಆಮ್ ಆದ್ಮಿ ಪಕ್ಷದ 20 ಶಾಸಕರನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದ್ದು, ಆಯೋಗದ ಈ ನಿರ್ಧಾರಕ್ಕೆ ಆಪ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ. ಶಾಸಕರಿಗೆ ತಮ್ಮ ಅಭಿಪ್ರಾಯ ಮಂಡಿಸಲು ಅವಕಾಶ ನೀಡಿಲ್ಲ ಎಂದು ಆಮ್ ಆದ್ಮಿ ಪಕ್ಷದ ನಾಯಕ ಸೌರಭ್ ಭಾರದ್ವಾಜ್ ಅವರು ಆರೋಪಿಸಿದ್ದಾರೆ.
ಚುನಾವಣಾ ಆಯುಕ್ತೆ ಎಕೆ ಜ್ಯೋತಿ ಅವರು ನಿವೃತ್ತಿಯಾಗುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ರುಣ ತಿರಿಸಲು ಈ ರೀತಿ ಶಿಫಾರಸು ಮಾಡಿದ್ದಾರೆ ಎಂದು ಭಾರದ್ವಾಜ್ ದೂರಿದ್ದಾರೆ.
ಎಎಪಿ ಶಾಸಕರು ಯಾವತ್ತೂ ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ. ಚುನಾವಣಾ ಆಯೋಗದ ಈ ನಿರ್ಧಾರ ಸರಿ ಇಲ್ಲ ಮತ್ತು ಇದು ನಮ್ಮ ಪಕ್ಷದ ವಿರುದ್ಧದ ಪಿತೂರಿ ಎಂದು ಆರೋಪಿಸಿದ್ದಾರೆ.