ನವದೆಹಲಿ: ಸುಪ್ರೀಂ ಕೋರ್ಟ್ ತನ್ನ ಪರವಾಗಿ ತೀರ್ಪು ನೀಡಿದ ಕೆಲವೇ ಕ್ಷಣಗಳಲ್ಲಿ, ಲೆಫ್ಟಿನೆಂಟ್ ಗವರ್ನರ್ ರಿಂದ ಐಎಎಸ್ ಹಾಗೂ ಇತರೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮತ್ತು ಹುದ್ದೆಗೆ ನೇಮಕ ಮಾಡುವ ಅಧಿಕಾರ ಮರಳಿ ಪಡೆದಿರುವುದಾಗಿ ದೆಹಲಿ ಸರ್ಕಾರ ಹೇಳಿದೆ.
ಎರಡು ವರ್ಷಗಳ ಹಿಂದೆ, ದೆಹಲಿ ಹೈಕೋರ್ಟ್ ನಿರ್ಧಾರದಂತೆ ಚುನಾಯಿತ ಸರ್ಕಾರದಿಂದ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆ ಅಧಿಕಾರ ಕಿತ್ತುಕೊಳ್ಳಲಾಗಿತ್ತು. ಈಗ ಆ ಅಧಿಕಾರವನ್ನು ಮರಳಿ ಪಡೆಯಲಾಗಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು ಹೇಳಿದ್ದಾರೆ.
ಒಬ್ಬ ಸಚಿವನಾಗಿ ಈ ವ್ಯವಸ್ಥೆ ಬದಲಾವಣೆಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನಾನು ಆದೇಶಿಸಿದ್ದೇನೆ ಎಂದು ಸಿಸೋಡಿಯಾ ವರದಿಗಾರರಿಗೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರದೊಂದಿಗೆ ಲೆಫ್ಟಿನೆಂಟ್ ಗವರ್ನರ್ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್ ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವಿನ ಅಧಿಕಾರ ಜಟಾಪಟಿಗೆ ಇಂದು ತೆರೆ ಎಳೆದಿದೆ.
ಸಂವಿಧಾನಾತ್ಮಕ ಅವಕಾಶವಿರದ ಹೊರತು ಲೆಫ್ಟಿನೆಂಟ್ ಗವರ್ನರ್ ಸ್ವತಂತ್ರವಾಗಿ ಅಧಿಕಾರ ನಡೆಸುವಂತಿಲ್ಲ ಮತ್ತು ಚುನಾಯಿತ ಸರ್ಕಾರದ ಪ್ರತಿರೋಧಿಯಾಗಿ ನಡೆದುಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
2016ರಲ್ಲಿ ಲೆಫ್ಟಿನೆಂಟ್ ಗವರ್ನರ್ ದೆಹಲಿ ಆಡಳಿತದ ಸೂತ್ರ ಹಿಡಿದಿರುತ್ತಾರೆ ಎಂದು ದೆಹಲಿ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು.