ಬಿಜೆಪಿ ಕಾರ್ಯಕರ್ತರು
ದೇಶ
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರೈಸ್ತರು ಭಾಗವಹಿಸಿಲ್ಲ: ಬಿಜೆಪಿ ಸಂಸದನ ಕ್ಷಮೆಯಾಚನೆಗೆ ಕಾಂಗ್ರೆಸ್ ಪಟ್ಟು
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರೈಸ್ತರು ಹೋರಾಟ ನಡೆಸಿಲ್ಲ ಎಂದು ಮುಂಬೈನ ಬಿಜೆಪಿ ಸಂಸದ ಗೋಪಾಲ್ ಶೆಟ್ಟಿ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದ್ದು...
ಮುಂಬೈ: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರೈಸ್ತರು ಹೋರಾಟ ನಡೆಸಿಲ್ಲ ಎಂದು ಮುಂಬೈನ ಬಿಜೆಪಿ ಸಂಸದ ಗೋಪಾಲ್ ಶೆಟ್ಟಿ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದ್ದು ಈ ಸಂಬಂಧ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಗೋಪಾಲ್ ಶೆಟ್ಟಿ ಹೇಳಿಕೆ ಸಂಬಂಧ ಕಿಡಿಕಾರಿರುವ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಕಮಿಟಿ(ಎಂಪಿಸಿಸಿ) ಕೂಡಲೇ ಸಂಸದರು ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.
ಕಬ್ರಸ್ತಾನ್ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಗೋಪಾಲ್ ಶೆಟ್ಟಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಗೋಪಾಲ್ ಶೆಟ್ಟಿ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ಬಿಜೆಪಿಗೆ ಇತಿಹಾಸ ಗೊತ್ತಿಲ್ಲ. ಬಿಜೆಪಿ ಸಂಸದನಿಗೂ ಇತಿಹಾಸ ಗೊತ್ತಿಲ್ಲ. ಅಥವಾ ಕೋಮುಸೌಹಾರ್ದತೆಯನ್ನು ಹಾಳುಮಾಡುವುದಕ್ಕೆ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದೆ.
ಕ್ರೈಸ್ತರು ಬ್ರಿಟನ್ ಮೂಲವನ್ನು ಹೊಂದಿದ್ದಾರೆ. ಆದ್ದರಿಂದ ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿರಲಿಲ್ಲ. ಭಾರತ ಹಿಂದೂಗಳಿಂದಾಗಲೀ ಅಥವಾ ಮುಸ್ಲಿಮರಿಂದಾಗಲಿ ಸ್ವಾತಂತ್ರ್ಯ ಪಡೆಯಲಿಲ್ಲ. ನಾವು ಹಿಂದೂಸ್ಥಾನಿಗಳಾಗಿ ಹೋರಾಟ ಮಾಡಿದ್ದಕ್ಕಾಗಿ ಸ್ವಾತಂತ್ರ್ಯ ದೊರೆಯಿತು ಎಂದು ಗೋಪಾಲ್ ಶೆಟ್ಟಿ ಹೇಳಿದ್ದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸದೇ ಇದ್ದದ್ದು ಕ್ರೈಸ್ತರೋ ಅಥವಾ ಮುಸ್ಲಿಮರೋ ಅಲ್ಲ, ಬದಲಾಗಿ ಆರ್ ಎಸ್ ಎಸ್ ಹಾಗೂ ಹಿಂದೂ ಮಹಾಸಭಾ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿರಲಿಲ್ಲ. ಇದು ಬಿಜೆಪಿಯ ಇತಿಹಾಸ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಆಕ್ರೋಶ ಹೊರಹಾಕಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ