ಬಿಜೆಪಿಯೊಂದಿಗೆ ಮೈತ್ರಿ ಮುಂದುವರೆಸಲು ನಿತೀಶ್ ನೇತೃತ್ವದ ಜೆಡಿಯು ಕಾರ್ಯಕಾರಿಣಿ ನಿರ್ಣಯ

2019 ರ ಲೋಕಸಭಾ ಚುನಾವಣೆಯಲ್ಲಿ ಜೆಡಿಯು ಎನ್ ಡಿಎ ಮೈತ್ರಿಕೂಟದೊಂದಿಗೇ ಉಳಿಯುವುದು ಬಹುತೇಕ ನಿಚ್ಚಳವಾಗಿದ್ದು, ಜು.08 ರಂದು ನಡೆದ ಜೆಡಿಯು ನೇತೃತ್ವದ ಕಾರ್ಯಕಾರಿಣಿ ಸಭೆಯಲ್ಲಿ
ನರೇಂದ್ರ ಮೋದಿ-ನಿತೀಶ್ ಕುಮಾರ್
ನರೇಂದ್ರ ಮೋದಿ-ನಿತೀಶ್ ಕುಮಾರ್
ಪಾಟ್ನಾ: 2019 ರ ಲೋಕಸಭಾ ಚುನಾವಣೆಯಲ್ಲಿ ಜೆಡಿಯು ಎನ್ ಡಿಎ ಮೈತ್ರಿಕೂಟದೊಂದಿಗೇ ಉಳಿಯುವುದು ಬಹುತೇಕ ನಿಚ್ಚಳವಾಗಿದ್ದು, ಜು.08 ರಂದು ನಡೆದ ಜೆಡಿಯು ನೇತೃತ್ವದ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮುಂದುವರೆಸಲು ತೀರ್ಮಾನಿಸಲಾಗಿದೆ. 
ಜೆಡಿಯು ಕಾರ್ಯಕಾರಿಣಿ ಸಭೆಯಲ್ಲಿ 2019 ರ ಲೋಕಸಭಾ ಚುನಾವಣೆ 2020 ರ ಬಿಹಾರ ವಿಧಾನಸಭಾ ಚುನಾವಣೆ ಬಗ್ಗೆಯೂ ಚರ್ಚೆ ನಡೆದಿದ್ದು, ಇದಕ್ಕೂ ಮುನ್ನ ನಿತೀಶ್ ಕುಮಾರ್ ಪಕ್ಷದ ಹಿರಿಯ ನಾಯಕರೊಂದಿಗೆ ಸಭೆ ನಡೆಸಿದ್ದರು. ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವುದಕ್ಕೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದೊಂದಿಗೆ ನಿತೀಶ್ ಕುಮಾರ್ ಭಿನ್ನಾಭಿಪ್ರಾಯ ಹೊಂದಿದ್ದರೂ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ಮುಂದುವರೆಸುವುದಕ್ಕೆ ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ. 
2019 ರ ಲೋಕಸಭಾ ಚುನಾವಣೇಯಲ್ಲಿ ಬಿಹಾರದಿಂದ 17 ಸ್ಥಾನಗಳಲ್ಲಿ ಸ್ಪರ್ಧಿಸಲು ಜೆಡಿಯು ತೀರ್ಮಾನಿಸಿದ್ದು, ಉಳಿದ ಸ್ಥಾನಗಳಲ್ಲಿ ಬಿಜೆಪಿಯೂ ಸೇರಿದಂತೆ ಎನ್ ಡಿಎ ಮೈತ್ರಿಕೂಟದ ಪಕ್ಷಗಳು ಸ್ಪರ್ಧಿಸಲಿವೆ. ಬಿಜೆಪಿ-ಜೆಡಿಯು ನಡುವೆ ಎಲ್ಲವೂ ಸರಿ ಇಲ್ಲ, ನಿತೀಶ್ ಕುಮಾರ್ ಬಿಜೆಪಿ ಸಖ್ಯ ತೊರೆಯಲಿದ್ದಾರೆ ಎಂಬ ವರದಿಗಳು ಪ್ರಕಟವಾಗಿದ್ದ ಹಿನ್ನೆಲೆಯಲ್ಲಿ ಜೆಡಿಯು ಕಾರ್ಯಕಾರಿಣಿ ಸಭೆ ಕುತೂಹಲ ಮೂಡಿಸಿತ್ತು. ಈ ನಡುವೆ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಒತ್ತಾಯಿಸಿ ಮೋದಿ ಸರ್ಕಾರದ ವಿರುದ್ಧ ಮುನಿಸಿಕೊಂಡು ಎನ್ ಡಿಎ ತೊರೆದಿದ್ದ ಚಂದ್ರಬಾಬು ನಾಯ್ಡು ಅವರನ್ನು ನಿತೀಶ್ ಕುಮಾರ್ ಬೆಂಬಲಿಸಿದ್ದರು. ಈ ಬೆಳವಣಿಗೆ ನಂತರ ನಿತೀಶ್ ಸಹ ಚಂದ್ರಬಾಬು ನಾಯ್ಡು ಹಾದಿಯನ್ನೇ ಹಿಡಿಯಲಿದ್ದಾರೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ ಜು.08 ರಂದು ನಡೆದ ಜೆಡಿಯು ಕಾರ್ಯಕಾರಿಣಿ ಸಭೆ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com