ಒಡಿಶಾ: ಈ ದೇವಿಗೆ ಮೀನು, ಮದ್ಯವೇ ನೈವೇದ್ಯ, ಭಕ್ತರಿಗೆ ಅದೇ ಪ್ರಸಾದ!

ಒಡಿಶಾ ರಾಜ್ಯದ ಪೈಕಾಸಹಿ ಎಂಬ ಗ್ರಾಮದಲ್ಲಿ ಉತ್ತರೇಶ್ವರಿ ದೇವಿಯ ದೇವಸ್ಥಾನವಿದೆ. ಕಾಣಲು ...
ಪೈಕಾಸಹಿ ಉತ್ತರೇಶ್ವರಿ ದೇವಾಲಯ
ಪೈಕಾಸಹಿ ಉತ್ತರೇಶ್ವರಿ ದೇವಾಲಯ

ಜಗತ್ಸಿಂಗಪುರ: ಒಡಿಶಾ ರಾಜ್ಯದ ಪೈಕಾಸಹಿ ಎಂಬ ಗ್ರಾಮದಲ್ಲಿ ಉತ್ತರೇಶ್ವರಿ ದೇವಿಯ ದೇವಸ್ಥಾನವಿದೆ. ಕಾಣಲು ಬೇರೆ ದೇವಾಲಯಗಳಂತೆಯೇ ಇದೆ. ಆದರೆ ದೇವಿಗೆ ನೀಡುವ ವಿಭಿನ್ನ ನೈವೇದ್ಯದಿಂದಾಗಿ ಈ ದೇವಾಲಯ ಸುದ್ದಿಯಾಗಿದೆ.

ಭಕ್ತರ ಸಮಸ್ಯೆ, ಅಪಸ್ಮಾರದಂತಹ ಕಾಯಿಲೆಗಳನ್ನು ಮದ್ಯ ಮತ್ತು ಮೀನು ನೀಡಿದರೆ ದೇವಿ ವಾಸಿ ಮಾಡುತ್ತಾಳೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಹೀಗಾಗಿ ಆರೋಗ್ಯ ಸಮಸ್ಯೆಯಿರುವ ಭಕ್ತರು ಹರಕೆ ಹೊತ್ತು ದೇವಿಗೆ ಮೀನು ಮತ್ತು ಮದ್ಯವನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ.

ಟಿರ್ಟೊಲ್ ತೆಹ್ಸಿಲ್ ಸಮೀಪ ಇಬಿರೈಸಿಂಗ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಉತ್ತರೇಶ್ವರಿ ದೇವಸ್ಥಾನವನ್ನು ಅಂದಿನ ಜಮೀನ್ದಾರ ಕನುಂಗೊ ಕೃಪಾಶಿಂಧು ದಾಸ್ ಕಟ್ಟಿಸಿದ್ದರು. ಜನಾರ್ದನ್ ಪಾಣಿ ಎಂಬ ಬ್ರಾಹ್ಮಣ ಭಿಕ್ಷುಕನಿಗೆ ಒಂದು ದಿನ ಕನಸಿನಲ್ಲಿ ದೇವಿ ಬಂದು ನಾನು ಈ ಗ್ರಾಮದಲ್ಲಿ ನೆಲೆಸಿ ಜನರ ರೋಗಗಳನ್ನು ವಾಸಿ ಮಾಡುತ್ತೇನೆ ಎಂದು ಹೇಳಿದ್ದಳಂತೆ. ಪಾಣಿ ಈ ವಿಷಯವನ್ನು ದಾಸ್ ಗೆ ಹೇಳಿದಾಗ ಅವರು ದೇವಿಯ ಹೆಸರಲ್ಲಿ ದೇವಾಲಯ ಕಟ್ಟಿಸಿದರಂತೆ. 1967ರ ಹೊತ್ತಿಗೆ ಚಂಡಮಾರುತಕ್ಕೆ ದೇವಾಲಯ ಹಾನಿಯಾಗಿದ್ದು ಹೊಸ ದೇವಸ್ಥಾನವನ್ನು ಕಟ್ಟಿಸಿ ಜನಾರ್ದನ ಪಾಣಿಯವರನ್ನು ಅರ್ಚಕರನ್ನಾಗಿ ಊರಿನ ಜನರು ನೇಮಿಸಿದರು.

ಒಂದು ದಿನ ಪಾಣಿ ಮೂರ್ಛೆ ಹೋಗಿ ದೇವಸ್ಥಾನದಲ್ಲಿ ಬಿದ್ದುಬಿಟ್ಟರು. ಕೊನೆಗೆ ದೇವಿಗೆ ನೈವೇದ್ಯ ಅರ್ಪಿಸಿದಾಗ ಅರ್ಚಕರಿಗೆ ಪ್ರಜ್ಞೆ ಬಂದಿತಂತೆ. ಅಲ್ಲಿಂದ ಅರ್ಚಕರು ದೇವಿಗೆ ಪ್ರತಿದಿನ ನೈವೇದ್ಯವಾಗಿ ಮದ್ಯ ಮತ್ತು ಮೀನಿನ ಮಾಂಸ ನೀಡಲು ಆರಂಭಿಸಿದರಂತೆ. ನಂತರ ಊರಿನ ಜನರು ಕೂಡ ಅದೇ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದರು. ಇಂದು ಮೂರ್ಛೆರೋಗವಿರುವವರು ಈ ದೇವಾಲಯಕ್ಕೆ ಹೋಗಿ ನೈವೇದ್ಯ ಅರ್ಪಿಸಿ ಹರಕೆ ಕಟ್ಟಿಕೊಳ್ಳುತ್ತಾರೆ.

ಅರ್ಚಕರು ಪೂಜೆ ಮಾಡುವಾಗ ಹೂವು, ಹಣ್ಣುಗಳ ಜೊತೆಗೆ ಮದ್ಯದ ಬಾಟಲಿಯನ್ನು ಕೂಡ ಇಡುತ್ತಾರೆ. ಈ ದೇವಸ್ಥಾನದ ಸುತ್ತಮುತ್ತ ಹಲವು ವೈವಿಧ್ಯದ ಮದ್ಯಗಳು ಸಿಗುತ್ತವೆ. ಭಕ್ತರು ತರುವ ಮದ್ಯದ ಬಾಟಲಿಯ ಮುಚ್ಚಳ ತೆಗೆದು ಅರ್ಚಕರು ತಟ್ಟೆಯಲ್ಲಿ ಹಾಕಿ ದೇವಿಯ ಬಾಯಿಯ ಹತ್ತಿರ ಇಡುತ್ತಾರೆ. ದೇವಿಗ ಅರ್ಪಿಸಿದ ನಂತರ ಮೀನು, ಮದ್ಯವನ್ನು ಪ್ರಸಾದವಾಗಿ ಭಕ್ತರಿಗೆ ಮತ್ತು ವಿಶೇಷವಾಗಿ ಮೂರ್ಛೆರೋಗದಿಂದ ಬಳಲುವ ಮಕ್ಕಳಿಗೆ ನೀಡಲಾಗುತ್ತದೆ ಎನ್ನುತ್ತಾರೆ ಪ್ರಧಾನ ಅರ್ಚಕ ಬನಂಬರ್ ಮಿಶ್ರಾ.

ದೇವಸ್ಥಾನದ ಸುತ್ತಮುತ್ತ ಯಾವುದೇ ಸಮಾಜ ವಿರೋಧಿ ಚಟುವಟಿಕೆ ನಡೆಯಬಾರದು ಎಂದು ಇತ್ತೀಚೆಗೆ ರಾತ್ರಿ ವೇಳೆ ಮಾತ್ರ ಮದ್ಯವನ್ನು ದೇವಿಗೆ ಅರ್ಪಿಸಲಾಗುತ್ತದೆ. ಹಗಲು ಅವಕಾಶ ನೀಡುವುದಿಲ್ಲ ಎಂದು ಇಲ್ಲಿನ ಸರ್ಪಂಚ್ ಬಿ ಬಂಡನ ದಾಸ್ ಹೇಳುತ್ತಾರೆ. ದೇವಸ್ಥಾನದ ಜನಪ್ರಿಯತೆಯನ್ನು ಕಂಡು ಇದನ್ನು ದೊಡ್ಡ ಮಟ್ಟದಲ್ಲಿ ಬೆಳೆಸುವ ಆಸೆ ಅವರದ್ದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com