ಉತ್ತರ ಪ್ರದೇಶ: 5 ತಿಂಗಳ ಕಾನೂನು ಹೋರಾಟದ ಬಳಿಕ ದಲಿತ ಯುವಕನ ಮದುವೆ ಮೆರವಣಿಗೆ

ಉತ್ತರ ಪ್ರದೇಶ ಕಾಸ್ಗಂಜ್ ಸಮೀಪದ ನಿಜಾಮ್ ಪುರ ಗ್ರಾಮದಲ್ಲಿ ಯುವಕನೊಬ್ಬ ಸುಮಾರು ಐದು...
ಮದುವೆ ಮೆರವಣಿಗೆ
ಮದುವೆ ಮೆರವಣಿಗೆ
ಕಾಸ್ಗಂಜ್(ಉತ್ತರ ಪ್ರದೇಶ): ಉತ್ತರ ಪ್ರದೇಶ ಕಾಸ್ಗಂಜ್ ಸಮೀಪದ ನಿಜಾಮ್ ಪುರ ಗ್ರಾಮದಲ್ಲಿ ಯುವಕನೊಬ್ಬ ಸುಮಾರು ಐದು ತಿಂಗಳ ಕಾಲ ಕಾನೂನು ಹೋರಾಟ ನಡೆಸಿ ಕೊನೆಗೂ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಮದುವೆ ಮೆರವಣಿಗೆ ನಡೆಸುವ ಮೂಲಕ ಗ್ರಾಮದಲ್ಲಿ ಕುದರೆ ಸವಾರಿ ಮಾಡಿದ ಮೊಟ್ಟ ಮೊದಲ ದಲಿತ ವರ ಎಂಬ ಗೌರವಕ್ಕೆ ಪಾತ್ರನಾಗಿದ್ದಾರೆ.
ಸುಮಾರು 100 ಮನೆಗಳಿರುವ, ಠಾಕೂರ್ ಸಮುದಾಯ ಪ್ರಾಬಲ್ಯವಿರುವ ಈ ಗ್ರಾಮದಲ್ಲಿ ದಲಿತರು ಮದುವೆ ಮೆರವಣಿಗೆ ಮಾಡುವಂತಿಲ್ಲ. ಆದರೆ ವರ ಸಂಜಯ್ ಜತವ್ ಅವರು ಭಾನುವಾರ ಮೊದಲ ಬಾರಿಗೆ ಐತಿಹಾಸಿಕ ಮದುವೆ ಮೆರವಣಿಗೆ ನಡೆಸುವ ಮೂಲಕ 80 ವರ್ಷಗಳ ನಂತರ ಜಾತಿಯ ಪೂರ್ವಗ್ರಹಗಳನ್ನು ತೊಡೆದು ಹಾಕಿದ್ದಾರೆ.
ಭಾರೀ ಭದ್ರತೆಯ ಮಧ್ಯೆ ಹಾಥ್ರಾಸ್ ನಿಂದ ಬಂದಿದ್ದ ವರನ ಮೆರವಣಿಗೆ ಕುದುರೆ ಸಾರೋಟಿನಲ್ಲಿ ಗ್ರಾಮದ ವಧುವಿನ ಮನೆಯವರೆಗೆ ಶಾಂತಿಯುತವಾಗಿ ನಡೆಯಿತು.
ಮೊದಲನಿಂದಲೂ ಸ್ಥಳೀಯ ಠಾಕೂರ್ ಸಮುದಾಯ ದಲಿತರ ಮದುವೆ ಮೆರವಣಿಗೆಯನ್ನು ವಿರೋಧಿಸುತ್ತಿತ್ತು. ಹೀಗಾಗಿ ಇದುವರೆಗೂ ದಲಿತರ ಮದುವೆ ಮೆರವಣಿಗೆ ನಡೆದಿರಲಿಲ್ಲ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಕಾಸ್ಗಂಜ್ ಹೆಚ್ಚುವರಿ ಪೋಲಿಸ್ ಅಧೀಕ್ಷಕ ಪವಿತ್ರ ಮೋಹನ್ ತ್ರಿಪಾಠಿ ಅವರು, ಮೆರವಣಿಗೆ ನಡೆಸುವಾಗ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ವಿವಾಹ ಸಮಾರಂಭ ಮುಕ್ತಾಯವಾಗುವವರೆಗೆ ನಾವು ಸಾಕಷ್ಟು ಪೋಲಿಸ್ ಸಿಬ್ಬಂಧಿಯನ್ನು ನಿಯೋಜಿಸಿದ್ದೇವೆ. ಮದುವೆಯ ಬಳಿಕ ನಮ್ಮ ಸಿಬ್ಬಂದಿ ಗ್ರಾಮದಲ್ಲಿ ಎಚ್ಚರಿಕೆ ವಹಿಸಿರುವುದರಿಂದ ಅನಿರೀಕ್ಷಿತ ಘಟನೆಗಳನ್ನು ತಡೆಯಲಿದ್ದಾರೆ ಎಂದಿದ್ದಾರೆ.
ಸಂಜಯಿ ಜತವ್ ಮತ್ತು ಶೀತಲ್ ಅವರ ಮದುವೆ ಮೆರವಣಿಗೆಗೆ ಹಲವು ಅಡೆತಡೆಗಳು ಎದುರಾಗಿದ್ದವು. ಆದರೆ ಇದಕ್ಕಾಗಿ ಸಂಜಯ್ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿ ಐದು ತಿಂಗಳ ಕಾನೂನು ಹೋರಾಟದ ಬಳಿಕ ವಧುವಿನೆ ಮನೆಗೆ ಕುದುರೆ ಸಾವಾರಿ ಮಾಡುವ ಕನಸು ನನಸು ಮಾಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com