ಆ್ಯಸಿಡ್ ದಾಳಿ, ರೇಪ್ ಸಂತ್ರಸ್ತರ ಪರಿಹಾರ ಮೊತ್ತ 3 ಲಕ್ಷದಿಂದ 7 ಲಕ್ಷಕ್ಕೆ ಏರಿಕೆ!
ಆ್ಯಸಿಡ್ ದಾಳಿ, ಅತ್ಯಾಚಾರ ಸಂತ್ರಸ್ತರ ಪರಿಹಾರ ಮೊತ್ತವನ್ನು ಬಿಹಾರ ಸರ್ಕಾರ 3 ಲಕ್ಷದಿಂದ 7 ಲಕ್ಷಕ್ಕೆ ಏರಿಕೆ ಮಾಡಿದ್ದು 14 ವರ್ಷದೊಳಗಿನ ಸಂತ್ರಸ್ತರಿಗೆ ಶೇಖಡ 50ರಷ್ಟು ಹೆಚ್ಚು ಪರಿಹಾರ ಹಣ ಸಿಗಲಿದೆ...
ಪಾಟ್ನಾ: ಆ್ಯಸಿಡ್ ದಾಳಿ, ಅತ್ಯಾಚಾರ ಸಂತ್ರಸ್ತರ ಪರಿಹಾರ ಮೊತ್ತವನ್ನು ಬಿಹಾರ ಸರ್ಕಾರ 3 ಲಕ್ಷದಿಂದ 7 ಲಕ್ಷಕ್ಕೆ ಏರಿಕೆ ಮಾಡಿದ್ದು 14 ವರ್ಷದೊಳಗಿನ ಸಂತ್ರಸ್ತರಿಗೆ ಶೇಖಡ 50ರಷ್ಟು ಹೆಚ್ಚು ಪರಿಹಾರ ಹಣ ಸಿಗಲಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಂಪುಟ ಸಚಿವ ಸಭೆಯಲ್ಲಿ ಮಾನವ ಕಳ್ಳಸಾಗಣೆ ಮತ್ತು ಲೈಂಗಿಕ ಕಿರುಕುಳದ ಸಂತ್ರಸ್ತರಿಗೆ ಪರಿಹಾರದ ಮೊತ್ತವನ್ನು ಹೆಚ್ಚಿಸುವ ಪ್ರಸ್ತಾಪಕ್ಕೆ ಅಂಕಿತ ಹಾಕಲಾಗಿದೆ ಎಂದು ಸಂಪುಟದ ಕಾರ್ಯದರ್ಶಿ ಯುಎ ಪಾಂಡೆ ಹೇಳಿದ್ದಾರೆ.
ಆ್ಯಸಿಡ್ ದಾಳಿಯ ಸಂತ್ರಸ್ತರಿಗೆ ಈ ಹಿಂದೆ 3 ಲಕ್ಷ ರುಪಾಯಿ ಪರಿಹಾರ ನೀಡಲಾಗುತ್ತಿತ್ತು. ಇದೀಗ ಅದನ್ನು 7 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇನ್ನು 14 ವರ್ಷ ಕಡಿಮೆ ವಯಸ್ಸಿನ ಆ್ಯಸಿಡ್ ದಾಳಿ ಅಥವಾ ಅತ್ಯಾಚಾರದ ಬಲಿಪಶುಗಳಿಗೆ ಶೇಖಡ 50 ಪ್ರತಿಶತದಷ್ಟು ಪರಿಹಾರವನ್ನು ಹೆಚ್ಚಿಸಲಾಗಿದೆ.
ಪ್ರಸ್ತುತ ಮಕ್ಕಳ ಸಾಗಣಿಕೆಯಲ್ಲಿ ಮಕ್ಕಳನ್ನು ಕಳೆದುಕೊಂಡವರಿಗೆ 1 ಲಕ್ಷ ರುಪಾಯಿ ಪರಿಹಾರ ನೀಡಲಾಗುತ್ತಿದ್ದು ಇದೀಗ ಅದನ್ನು 2 ಲಕ್ಷಕ್ಕೆ ಏರಿಸಲಾಗಿದೆ. ಕಿರುಕುಳ ಸಂತ್ರಸ್ತರಿಗೆ 50 ಸಾವಿರ ಪರಿಹಾರ ಮೊತ್ತದ ಬದಲಿಗೆ 1 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.