ಇಂದಿನಿಂದ ಆರಂಭವಾಗಿರುವ ಮುಂಗಾರು ಅಧಿವೇಶನದಲ್ಲಿ ಯಥಾಪ್ರಕಾರ ವಿರೋಧ ಪಕ್ಷಗಳು ಕೋಲಾಹಲ ಎಬ್ಬಿಸಿದ್ದು, ಮಕ್ಕಳ ಕಳ್ಳರೆಂದು ಅಮಾಯಕರನ್ನು ಬಡಿದು ಕೊಲ್ಲುತ್ತಿರುವುದು, ನಿರುದ್ಯೋಗ, ಮಹಿಳಾ ಸುರಕ್ಷತೆ, ಜಮ್ಮು-ಕಾಶ್ಮೀರ ಪರಿಸ್ಥಿತಿ, ಕದನ ವಿರಾಮ ಉಲ್ಲಂಘನೆ, ಬೆಲೆ ಏರಿಕೆ ಇತ್ಯಾದಿ ವಿಚಾರಗಳ ಕುರಿತಂತೆ ಆಡಳಿತಾರೂಢ ಎನ್'ಡಿಎ ಸರ್ಕಾರದ ವಿರುದ್ಧ ಕಿಡಿಕಾರಿವೆ.
ಈ ನಡುವಲ್ಲೇ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿಕೆ ನಿರಾಕರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಟಿಡಿಪಿ ಪಕ್ಷಗಳು ಕೇಂದ್ರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದು, ವಿಪಕ್ಷಗಳ ಅವಿಶ್ವಾಸ ನಿರ್ಣಯ ಮಂಡನೆಯನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಅಂಗೀಕರಿಸಿದ್ದಾರೆ. ಅಲ್ಲದೆ, ಅವಿಶ್ವಾಸ ನಿರ್ಣಯ ಮಂಡನೆ ಕುರಿತ ಚರ್ಚೆಗೆ ಶೀಘ್ರದಲ್ಲಿಯೇ ದಿನಾಂಕ ಹಾಗೂ ಸಮಯವನ್ನು ಘೋಷಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.