ಕಾಶ್ಮೀರ: ಪಾಕ್ ಮೂಲದ ಚಾನೆಲ್ ಗಳೂ ಸೇರಿದಂತೆ 30 ಇಸ್ಲಾಮಿಕ್ ವಾಹಿನಿಗಳ ಪ್ರಸಾರಕ್ಕೆ ನಿಷೇಧ!
ರಾಜಕೀಯ ಬಿಕ್ಕಟ್ಟಿನಿಂದಾಗಿ ರಾಷ್ಟ್ರಪತಿ ಆಡಳಿತ ಜಾರಿಯಾಗಿರುವ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಮೂಲದ ಚಾನೆಲ್`ಗಳೂ ಸೇರಿದಂತೆ 30 ಇಸ್ಲಾಮಿಕ್ ವಾಹಿನಿಗಳ ಪ್ರಸಾರಕ್ಕೆ ನಿಷೇಧ ಹೇರಲಾಗಿದೆ.
ಶ್ರೀನಗರ: ರಾಜಕೀಯ ಬಿಕ್ಕಟ್ಟಿನಿಂದಾಗಿ ರಾಷ್ಟ್ರಪತಿ ಆಡಳಿತ ಜಾರಿಯಾಗಿರುವ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಮೂಲದ ಚಾನೆಲ್`ಗಳೂ ಸೇರಿದಂತೆ 30 ಇಸ್ಲಾಮಿಕ್ ವಾಹಿನಿಗಳ ಪ್ರಸಾರಕ್ಕೆ ನಿಷೇಧ ಹೇರಲಾಗಿದೆ.
ಕಲ್ಲು ತೂರಾಟ, ಉಗ್ರಗಾಮಿಗಳಿಗೆ ನೆರವು, ಕೋಮುಗಲಭೆ, ಹಿಂಸಾಚಾರಗಳಿಂದ ತತ್ತರಿಸಿ ಹೋಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮತ್ತುಸೌಹಾರ್ಧತೆ ಕಾಪಾಡಲು ಸ್ಥಳೀಯ ಅಧಿಕಾರಿಗಳು ಪಾಕಿಸ್ತಾನ ಮೂಲದ ಚಾನೆಲ್`ಗಳೂ ಸೇರಿದಂತೆ 30 ಇಸ್ಲಾಮಿಕ್ ವಾಹಿನಿಗಳ ಪ್ರಸಾರಕ್ಕೆ ನಿಷೇಧ ಹೇರಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಶ್ರೀನಗರ ಉಪ ಜಿಲ್ಲಾಧಿಕಾರಿಗಳು ರಾಜ್ಯದ ಎಲ್ಲ ಕೇಬಲ್ ಆಪರೇಟರ್ ಗಳಿಗೆ ನಿರ್ದೇಶನ ಜಾರಿ ಮಾಡಿದ್ದು, ಪಾಕಿಸ್ತಾನದ ವಾಹಿನಿಗಳೂ ಸೇರಿದಂತೆ 30 ಇಸ್ಲಾಮಿಕ್ ವಾಹಿನಿಗಳ ಪ್ರಸಾರವನ್ನು ಕೂಡಲೇ ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ಇದಲ್ಲದೆ ಪರವಾನಗಿ ಇಲ್ಲದೇ ರಾಜ್ಯದಲ್ಲಿ ಪ್ರಸಾರವಾಗುತ್ತಿರುವ ಚಾನಲ್ ಗಳು, ನಿಷೇಧಿತ ಸ್ಯಾಟೆಲೈಟ್ ಗಳ ಸಿಗ್ನಲ್ ನಿಂದ ಮೂಡಿಬರುತ್ತಿರುವ ಚಾನಲ್ ಗಳ ಪ್ರಸಾರವನ್ನೂ ಸ್ಥಗಿತಗೊಳಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಮೂಲಗಳ ಪ್ರಕಾರ ಅಧಿಕಾರಿಗಳ ಸೂಚನೆಯಂತೆ ಜಿಯೋ ಟಿವಿ, ಎಆರ್ ವೈ, ಕ್ಯೂ ಟಿವಿ, ಸೌದಿ ಖುರಾನ್, ಸೌದಿ, ಹಾದಿ, ಕರ್ಬಲಾ, ಪೈಘಮ್, ಪೀಸ್ ಟಿವಿ ಉರ್ದು, ಹಾದಿ, ನೂರ್, ಸೆಹರ್, ಮದನಿ, ಸೌದಿ ಸುನ್ನಾಸೇರಿದಂತೆ ಹಲವು ವಾಹಿನಿಗಳ ಪ್ರಸಾರ ಕಾಶ್ಮೀರದಲ್ಲಿ ಸ್ಥಗಿತವಾಗಲಿವೆ ಎಂದು ಹೇಳಲಾಗಿದೆ.
ಇನ್ನು ಜಿಲ್ಲಾಡಳಿತದ ನಿರ್ಧಾರವನ್ನು ಪಕ್ಷೇತರ ಶಾಸಕ ಶೇಕ್ ಅಬ್ದುರ್ ರಷೀದ್ ಟೀಕಿಸಿದ್ದು, ಇದು ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಟೀಕಿಸಿದ್ದಾರೆ. ಅಂತೆಯೇ ಅಧಿಕಾರಿಗಳಿಗೆ ಪರಿಸ್ಥಿತಿಯನ್ನು ಹೇಗೆ ನಿಯಂತ್ರಿಸಬೇಕು ಎಂದು ತಿಳಿಯದೇ ದಡ್ಡತನದಿಂದ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.