ಅವಿಶ್ವಾಸ ನಿರ್ಣಯ ಮಂಡನೆ: 15 ವರ್ಷಗಳಲ್ಲಿ ಇದೇ ಮೊದಲು, ಒಟ್ಟಾರೆ 27ನೇಯದ್ದು!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತಾರೂಢ ಎನ್ ಡಿಎ ಸರ್ಕಾರ ನಿನ್ನೆ ಅವಿಶ್ವಾಸ ನಿರ್ಣಯ ಎದುರಿಸಿ ಅಗತ್ಯ ಬಹುಮತ ಪಡೆಯುವ ಮೂಲಕ ವಿಶ್ವಾಸ ಮತ ಗೆದ್ದಿದೆ. ಆದರೆ ದೇಶದ ರಾಜಕೀಯ ಇತಿಹಾಸದಲ್ಲಿ ಇದು ಮೊದಲೇನಲ್ಲ..
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತಾರೂಢ ಎನ್ ಡಿಎ ಸರ್ಕಾರ ನಿನ್ನೆ ಅವಿಶ್ವಾಸ ನಿರ್ಣಯ ಎದುರಿಸಿ ಅಗತ್ಯ ಬಹುಮತ ಪಡೆಯುವ ಮೂಲಕ ವಿಶ್ವಾಸ ಮತ ಗೆದ್ದಿದೆ. ಆದರೆ ದೇಶದ ರಾಜಕೀಯ ಇತಿಹಾಸದಲ್ಲಿ ಇದು ಮೊದಲೇನಲ್ಲ..
ಮಾಜಿ ಪ್ರಧಾನಿಗಳಾದ ಲಾಲ್ ಬಹದ್ದೂರ್ ಶಾಸ್ತ್ರಿ, ಪಿವಿ ನರಸಿಂಹ ರಾವ್, ಮೊರಾರ್ಜಿ ದೇಸಾಯಿ, ಇಂದಿರಾಗಾಂಧಿ, ರಾಜೀವ್ ಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ರಂತಹ ಘಟಾನುಘಟಿ ನಾಯಕರೂ ಕೂಡ ವಿಪಕ್ಷಗಳಿಂದ ಅವಿಶ್ವಾಸ ನಿರ್ಣಯ ಎದುರಿಸಿದ್ದಾರೆ. ಈ ಪೈಕಿ ಹಲವು ವಿಶ್ವಾಸ ಮತ ಗೆದ್ದಿದ್ದು, ಹಲವು ವಿಶ್ವಾಸ ಮತ ಸಾಬೀತು ಮಾಡಲಾಗದೇ ಅಧಿಕಾರ ಕಳೆದುಕೊಂಡಿದ್ದಾರೆ. 
1963ರಲ್ಲಿ ಜವಹರ್ ಲಾಲ್ ನೆಹರೂ ಅವರ ವಿರುದ್ಧ ಮೊದಲ ಬಾರಿಗೆ ಅವಿಶ್ವಾಸ ನಿರ್ಣಯ ಮಂಡನೆಯಾಗಿತ್ತು. 1963ರ ಆಗಸ್ಟ್ ನಲ್ಲಿ ವಿಪಕ್ಷ ನಾಯಕ ಎಬಿ ಕೃಪಲಾನಿ ಅವರು ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಸಂಸತ್ ಭವನದ ಅಧಿಕಾರಿಗಳು ನೀಡಿರುವ ದತ್ತಾಂಶಗಳ ಅನ್ವಯ ನಿನ್ನೆ ನಡೆದ ಅವಿಶ್ವಾಸ ನಿರ್ಣಯ ಮಂಡನೆ 27ನೇಯದ್ದಾಗಿದ್ದು, ಕಳೆದ ವರ್ಷಗಳಲ್ಲಿ ನಡೆದ ಮೊದಲ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ಈ ಹಿಂದೆ ಸಾಕಷ್ಟು ಪ್ರಧಾನಿಗಳು ಅವಿಶ್ವಾಸ ನಿರ್ಣಯ ಎದುರಿಸಿದ್ದು, ಲಾಲ್ ಬಹದ್ದೂರ್ ಶಾಸ್ತ್ರಿ ಮೂರು ಬಾರಿ, ಪಿವಿ ನರಸಿಂಹರಾವ್ ಮೂರು ಬಾರಿ, ಎರಡು ಬಾರಿ ಮೊರಾರ್ಡಜಿ ದೇಸಾಯಿ, ರಾಜೀವ್ ಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ತಲಾ ಒಂದು ಬಾರಿ ಅವಿಶ್ವಾಸ ನಿರ್ಣಯ ಎದುರಿಸಿದ್ದರು.
ಕೊನೆಯ ಬಾರಿಗೆ ಅಂದರೆ 2003ರಲ್ಲಿ ಅಂದಿನ ಪ್ರಧಾನಿ ಅಟಲ್  ಬಿಹಾರಿ ವಾಜಪೇಯಿ ಅವರ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಅವರು ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಇನ್ನು ಸಂಸತ್ ಇತಿಹಾಸದಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಬಳಿಕ ಒಮ್ಮೆ ಮಾತ್ರ ಪ್ರಧಾನಿ ಅಧಿಕಾರ ಕಳೆದುಕೊಂಡಿದ್ದು, 1979ರಲ್ಲಿ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಅಧಿಕಾರ ಕಳೆದುಕೊಂಡಿದ್ದರು. 
ಅತಿ ಹೆಚ್ಚು ಬಾರಿ ಅವಿಶ್ವಾಸ ಪರೀಕ್ಷೆ ಎದುರಿಸಿದ್ದರು ಇಂದಿರಾ ಗಾಂಧಿ
ಈ ಪೈಕಿ ಅತೀ ಹೆಚ್ಚು ಬಾರಿ ವಿಪಕ್ಷಗಳ ಅವಿಶ್ವಾಸ ಎದುರಿಸಿದ್ದು, ಕಾಂಗ್ರೆಸ್ ಪಕ್ಷ ಅಧಿನಾಯಕಿ ಮತ್ತು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು. ಕಾಂಗ್ರೆಸ್​ನಿಂದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಇಂದಿರಾ ಗಾಂಧಿ ವಿರುದ್ಧ ಅತಿ ಹೆಚ್ಚು ಬಾರಿ ಅವಿಶ್ವಾಸ ನಿರ್ಣಯ ಮಂಡನೆಯಾಗಿದ್ದು ವಿಶೇಷ. ಇಂದಿರಾ ಗಾಂಧಿಯವರ ಅಧಿಕಾರಾವಧಿಯಲ್ಲಿ ಬರೋಬ್ಬರಿ 15 ಬಾರಿ ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡನೆಯಾಗಿತ್ತು. 15 ಬಾರಿಯೂ ಅವರು ಪಾಸ್​ ಆಗಿದ್ದು ಸಂಸತ್ತಿನ ಮಟ್ಟಿಗೆ ದಾಖಲೆಯಾಗಿದೆ.
ಕಳೆದ 25 ವರ್ಷದಲ್ಲಿ ನಾಲ್ಕ ಬಾರಿ ಅವಿಶ್ವಾಸ ನಿರ್ಣಯ
1993ರಲ್ಲಿ ಬಾಬ್ರಿ ಮಸೀದಿ ಧ್ವಂಸ ಹಿನ್ನೆಲೆ ಅಂದಿನ ಪ್ರಧಾನ ಮಂತ್ರಿ ಪಿ. ವಿ. ನರಸಿಂಹರಾವ್ ವಿರುದ್ಧ ಅವಿಶ್ವಾಸ ಮಂಡನೆಯಾಗಿತ್ತು. ಅವಿಶ್ವಾಸ ನಿರ್ಣಯದಲ್ಲಿ ನರಸಿಂಹರಾವ್​ ಪಾಸ್​ ಆಗಿದ್ದರು.
ವಾಜಪೇಯಿಗೂ ಬಿಟ್ಟಿರಲಿಲ್ಲಾ ಅವಿಶ್ವಾಸ ನಿರ್ಣಯ
1999 ಏಪ್ರಿಲ್​ನಲ್ಲಿ ವಾಜಪೇಯಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡನೆಯಾಗಿತ್ತು. ಕೇವಲ ಒಂದು ವೋಟಿನಲ್ಲಿ ವಾಜಪೇಯಿ ಸರ್ಕಾರ ಪತನಗೊಂಡಿತ್ತು. ತಮಿಳುನಾಡಿನ ಎಐಎಡಿಎಂಕೆ ಜಯಲಲಿತಾ ಬೆಂಬಲ ನೀಡದ ಹಿನ್ನೆಲೆಯಲ್ಲಿ ಸರ್ಕಾರ ಪತನಗೊಂಡಿತ್ತು. 2003 ರಲ್ಲಿ ಮತ್ತೊಮ್ಮೆ ವಾಜಪೇಯಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಯಾಗಿತ್ತು. ಆಗ ವಾಜಪೇಯಿ ಸರ್ಕಾರ ಗೆದ್ದಿತ್ತು.
ಭಾರತ-ಅಮೆರಿಕ ಅಣು ಒಪ್ಪಂದ ಹಿನ್ನೆಲೆಯಲ್ಲಿ 2008 ರಲ್ಲಿ ಮನಮೋಹನ್​ ಸಿಂಗ್​ ಸರ್ಕಾರದಿಂದ ಸಿಪಿಎಂ ತನ್ನ ಬೆಂಬಲ ವಾಪಸ್ ಪಡೆದಿತ್ತು​. ಈ ಹಿನ್ನೆಲೆಯಲ್ಲಿ ವಿಶ್ವಾಸ ಮತ ಸಾಬೀತು ಪಡಿಸುವ ಅನಿವಾರ್ಯ ಸಿಂಗ್​ ಸರ್ಕಾರಕ್ಕೂ ಬಂದಿತ್ತು. ಅವಿಶ್ವಾಸ ನಿರ್ಣಯ ಪರೀಕ್ಷೆಯಲ್ಲಿ ಸಿಂಗ್​ ಸರ್ಕಾರ ಪಾಸ್​ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com