ಪ್ರಧಾನಿ ಮೋದಿ ವಿಶ್ವದ ಅತ್ಯುತ್ತಮ ನಟ, ಅಭಿನಯ ಚಕ್ರವರ್ತಿ; ಟಿಡಿಪಿ

ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವದ ಅತ್ಯುತ್ತಮ ನಟ, ಅಭಿನಯ ಚಕ್ರವರ್ತಿ ಎಂದು ಟಿಡಿಪಿ ಸಂಸದ ಕೇಸಿನೇನಿ ಶ್ರೀನಿವಾಸ್ ರೆಡ್ಡಿಯವರು ಆರೋಪಿಸಿದರು...
ಟಿಡಿಪಿ ಸಂಸದ ಕೇಸಿನೇನಿ ಶ್ರೀನಿವಾಸ್ ರೆಡ್ಡಿ
ಟಿಡಿಪಿ ಸಂಸದ ಕೇಸಿನೇನಿ ಶ್ರೀನಿವಾಸ್ ರೆಡ್ಡಿ
ನವದೆಹಲಿ; ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವದ ಅತ್ಯುತ್ತಮ ನಟ, ಅಭಿನಯ ಚಕ್ರವರ್ತಿ ಎಂದು ಟಿಡಿಪಿ ಸಂಸದ ಕೇಸಿನೇನಿ ಶ್ರೀನಿವಾಸ್ ರೆಡ್ಡಿಯವರು ಆರೋಪಿಸಿದರು. 
ಕೇಂದ್ರದ ಆಡಳಿತಾರೂಢ ಎನ್'ಡಿಎ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮಂಡನೆ ಮಾಡಿದ್ದ ಅವಿಶ್ವಾಸ ನಿರ್ಣಯ ನಿನ್ನೆ ಲೋಕಸಭೆಯಲ್ಲಿ ಭಾರೀ ವಾಕ್ಸಮರಕ್ಕೆ ಕಾರಣವಾಗಿತ್ತು. 
ಆಡಳಿತಾರೂಢ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಸೇರಿದಂದೆ ಇತರೆ ಘಟಾನುಘಟಿಗಳು ವಾಗ್ದಾಳಿ ನಡೆಸಿದ್ದವು. ನಂತರ 2 ಗಂಟೆಗಳ ಕಾಲ ಸುದೀರ್ಘವಾಗಿ ಮಾತನಾಡಿದ ಪ್ರಧಾನಿ ಮೋದಿಯವರು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದರು. 
ಮೋದಿ ಭಾಷಣದ ಬಳಿಕ ಎದ್ದು ನಿಂತ ಟಿಡಿಪಿ ಸಂಸದ ಶ್ರೀನಿವಾಸ್ ರೆಡ್ಡಿಯವರು, ಮೋದಿಯವರ ಹೇಳಿಕೆಗಳಿಗೆ ಉತ್ತರ ನೀಡಲು 30 ನಿಮಿಷಗಳ ಕಾಲಾವಕಾಶ ನೀಡುವಂತೆ ಸ್ಪೀಕರ್ ಬಳಿ ಮನವಿ ಮಾಡಿಕೊಂಡರು. ಇದಕ್ಕೆ ನಿರಾಕರಿಸಿದ ಸ್ಪೀಕರ್ ಕೇವಲ 5 ನಿಮಿಷ ನೀಡುವುದಾಗಿ ತಿಳಿಸಿ, ಮಾತನಾಡಲು ಆರಂಭಿಸುವಂತೆ ತಿಳಿಸಿದರು. 
ಆದರೆ, ಇದಕ್ಕೆ ಒಪ್ಪದ ಶ್ರೀನಿವಾಸ್ ಅವರು 30 ನಿಮಿಷ ಬೇಕೆಂದು ಹೇಳಿದರು. ಮಾತಿನ ಚಕಮಕಿ ಬಳಿಕ ಸ್ಪೀಕರ್ ಅವರ ಸೂಚನೆಯಂತೆಯೇ 5 ನಿಮಿಷಗಳ ಕಾಲ ಮಾತನಾಡಲು ಒಪ್ಪಿದ ಶ್ರೀನಿವಾಸ್ ಅವರು, ಪ್ರಧಾನಿ ಮೋದಿ ವಿಶ್ವದ ಅತ್ಯುತ್ತಮ ನಟ. ಅಭಿನಯ ಚಕ್ರವರ್ತಿ. ಅವರ ಈ ಒಂದೂವರೆ ಕಾಲದ ಭಾಷಣ ಬಾಲಿವುಡ್ ಬ್ಲಾಕ್'ಬಸ್ಟರ್ ಸಿನಿಮಾ ನೋಡಿದಂತಾಯಿತು. ಮೋದಿಯವರ ಈ ಭಾಷಣಗಳಿಂದ ನಾವು ಕೂಡ ಮೋಸ ಹೋಗಿದ್ದೇವೆಂದು ಹೇಳಲು ಆರಂಭಿಸಿದರು. 
ಈ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್ ಮೋದಿಯವರ ಹೇಳಿಕೆಗಳಿಗೆ ಉತ್ತರ ಕೊಡಬೇಕೆ ಹೊರತು. ಈ ರೀತಿಯ ಮಾತುಗಳನ್ನಾಡುವುದು ಸರಿಯಲ್ಲ ಎಂದು ಹೇಳಿದರು. ನಂತರ ಮತ್ತೆ ಮಾತನಾಡಲು ಅವಕಾಶ ನೀಡಿದಾಗಲೂ ಶ್ರೀನಿವಾಸ್ ಅವರು ಮತ್ತದೇ ರೀತಿಯ ಹೇಳಿಕೆಗಳನ್ನು ನೀಡಲು ಆರಂಭಿಸಿದರು. ಈ ವೇಳೆ ಶ್ರೀನಿವಾಸ್ ಅವರಿಗೆ ನೀಡಲಾಗಿದ್ದ ಕಾಲಾವಕಾಶವನ್ನು ಹಿಂಪಡೆದ ಸ್ಪೀಕರ್ ನಿರ್ಣಯವನ್ನು ಮತಕ್ಕೆ ಹಾಕಿದರು. ಆದರೆ, ಅದು ಬಿದ್ದು ಹೋಯಿತು ಎಂದು ಘೋಷಣೆ ಮಾಡಿದರು. 
ನಂತರ ವಿರೋಧ ಪಕ್ಷಗಳ ಬೇಡಿಕೆಯಂತೆ ನಿರ್ಣಯವನ್ನು ಮತಕ್ಕೆ ಹಾಕಲಾಯಿತು. ಈ ವೇಳೆ ಸದನದಲ್ಲಿ 451 ಸದಸ್ಯರು ಹಾಜರಿದ್ದರು. ವಿಪಕ್ಷಗಳ ನಿರ್ಣಯದ ವಿರುದ್ಧ 325 ಮತಗಳು ಚಲಾವಣೆಯಾಯಿತು. ನಿರ್ಣಯದ ಪರ ಕೇವಲ 126 ಮತ ಚಲಾವಣೆಯಾಗಿದ್ದು, ಈ ಮೂಲಕ ಸರ್ಕಾರದ ವಿರುದ್ಧ ಟಿಡಿಪಿ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com