ಸಂಗ್ರಹ ಚಿತ್ರ
ದೇಶ
ಅಮರನಾಥ ಯಾತ್ರೆ ಮೇಲೆ ದಾಳಿಗೆ ಒಗ್ಗೂಡಿದ ಉಗ್ರ ಸಂಘಟನೆಗಳು: ಗುಪ್ತಚರ ಇಲಾಖೆ ಎಚ್ಚರಿಕೆ
ಅಮರನಾಥ ಯಾತ್ರೆ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಮೂಲಕ ಮೂವರು ಉಗ್ರ ಸಂಘಟನೆಗಳು ಒಗ್ಗೂಡಿದ್ದು, ವಿಧ್ವಂಸಕ ಕೃತ್ಯವೆಸಗಲು ಭಾರೀ ಸಂಚು ರೂಪಿಸಿವೆ ಎಂದು ಗುಪ್ತಚರ ಇಲಾಖೆ ಮಾಹಿತಿ ಎಚ್ಚರಿಕೆ ನೀಡಿದೆ...
ನವದೆಹಲಿ; ಅಮರನಾಥ ಯಾತ್ರೆ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಮೂಲಕ ಮೂವರು ಉಗ್ರ ಸಂಘಟನೆಗಳು ಒಗ್ಗೂಡಿದ್ದು, ವಿಧ್ವಂಸಕ ಕೃತ್ಯವೆಸಗಲು ಭಾರೀ ಸಂಚು ರೂಪಿಸಿವೆ ಎಂದು ಗುಪ್ತಚರ ಇಲಾಖೆ ಮಾಹಿತಿ ಎಚ್ಚರಿಕೆ ನೀಡಿದೆ.
ಅಮರನಾಥ ಯಾತ್ರೆ ಮಾರ್ಗದಲ್ಲಿ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದು, ಉಗ್ರರ ಚಟುವಟಿಕೆಗಳ ಕುರಿತಂತೆ ಮಾಹಿತಿ ಕಲೆ ಹಾಕಿರುವ ಅಧಿಕಾರಿಗಳು ಭಾರೀ ಕಟ್ಟೆಚ್ಚರದಿಂದ ಇರುವಂತೆ ಎಚ್ಚರಿಕೆ ನೀಡಿದೆ. ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಅನ್ವಯ ಜಮ್ಮು ಮತ್ತು ಕಾಶ್ಮೀರದಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪಾಕಿಸ್ತಾನ ಮೂಲಕ ಲಷ್ಕರ್-ಇ-ತೊಯ್ಬಾ, ಜೈಷ್-ಇ-ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳು ಅಮರನಾಥ ಯಾತ್ರೆ ಮೇಲೆ ದಾಳಿ ನಡೆಸಲು ಸಂಚು ರೂಪಿಸಿವೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಜೂನ್. 28 ರಿಂದ ಅಮರನಾಥ ಯಾತ್ರೆ ಆರಂಭಗೊಂಡಿದ್ದು, ಯಾತ್ರೆಯಲ್ಲಿ 2.5 ಲಕ್ಷ ಯಾತ್ರಿಕರು ಪಾಲ್ಗೊಂಡಿದ್ದಾರೆ. ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ದಿನದಂದು ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಿವೆ. ಜುಲೈ.17 ಮತ್ತು 18 ರಂದು ಇಬ್ಬರು ಉಗ್ರರ ನಡುವೆ ನಡೆದಿರುವ ಸಂಭಾಷಣೆಯಲ್ಲಿ ಈ ಮಾಹಿತಿ ತಿಳಿದುಬಂದಿದೆ ಎಂದು ಮಾಹಿತಿ ನೀಡಿವೆ.
ಈ ಕುರಿತು ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ದಾಳಿಗೆ ಉಗ್ರರು ಸಂಚು ರೂಪಿಸಿರುವುದು ನಿಜ. ಆದರೆ, ಉಗ್ರರ ಯತ್ನಗಳು ಯಶಸ್ವಿಗೊಳ್ಳಲು ಬಿಡುವುದಿಲ್ಲ. ಈಗಾಗಲೇ ಎಲ್ಲಾ ರೀತಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆತ್ಮಾಹುತಿ ಬಾಂಬ್ ದಾಳಿ ಬೆದರಿಕೆ ಕೇವಲ ಕಾಶ್ಮೀರದಲ್ಲಿ ಅಷ್ಟೇ ಅಲ್ಲದೆ, ಪಂಜಾಬ್ ಮೇಲೂ ದಾಳಿ ದಾಳಿ ನಡೆಸುವ ಬೆದರಿಕೆಗಳು ಬಂದಿವೆ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿರುವ ಕೆಲ ವಾಂಟೆಡ್ ಉಗ್ರರು ಈಗಾಗಲೇ ಅಮರನಾಥ ಯಾತ್ರಾ ಮಾರ್ಗದ ಹತ್ತಿರವೇ ಇದ್ದು, ಎ++ ವಿಭಾಗದ ಉಗ್ರ ಎಲ್ಇಟಿ ಕಮಾಂಡರ್ ಐಜಾಜ್ ಅಲಿಯಾಸ್ ಅಬು ಹುರೈರಾ ಕೆಲ ಉಗ್ರರೊಂದಿಗೆ ಯಾತ್ರೆ ಮಾರ್ಗದಲ್ಲಿಯೇ ಇದ್ದಾನೆಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ