

ನವದೆಹಲಿ: ತಮ್ಮ ತಿಂಗಳ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುಗಾಂವ್ ಮೂಲದ ವಿಶೇಷಚೇತನ ಹುಡುಗಿಯ ಬಗ್ಗೆ ಮಾತನಾಡಿದ್ದು ಅದು ವ್ಯಾಪಕ ಸುದ್ದಿಯಾಗಿದೆ. ಇದೀಗ ಆ ಬಾಲಕಿ ಖುಷಿಯಾಗಿದ್ದಾಳೆ.
ಗುರುಗಾಂವ್ ನ ಸನ್ ಸಿಟಿ ಶಾಲೆಯ ವಿದ್ಯಾರ್ಥಿನಿಯಾಗಿರುವ 15 ವರ್ಷದ ಅನುಶ್ಕಾ ಪಾಂಡ, ಬೆನ್ನುಮೂಳೆಯ ಸ್ನಾಯುಕ್ಷೀಣತೆ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಈಕೆ ಇತ್ತೀಚೆಗೆ 10ನೇ ತರಗತಿಯ ಸಿಬಿಎಸ್ಇ ಪರೀಕ್ಷೆಯಲ್ಲಿ ವಿಶೇಷಚೇತನರ ವಿಭಾಗದಲ್ಲಿ ಶೇಕಡಾ 97.8ರಷ್ಟು ಅಂಕ ಗಳಿಸಿ ಮೊದಲ ಸ್ಥಾನ ಗಳಿಸಿದ್ದಾಳೆ.
ವಂಶಪರಂಪರೆಯ ಸಮಸ್ಯೆಯಿಂದ ಬಳಲುತ್ತಿರುವ ಅನುಶ್ಕಾಗೆ ನಡೆಯಲು ಸಾಧ್ಯವಾಗುವುದಿಲ್ಲ, ವೀಲ್ ಚೇರ್ ನಲ್ಲಿ ಓಡಾಡುತ್ತಾಳೆ. ಬೇರೆ ಮಕ್ಕಳಿಗೆ ಅನುಶ್ಕಾ ಅನುಕರಣೀಯ ಎಂದು ಪ್ರಧಾನಿ ಆಕೆಯನ್ನು ಹೊಗಳಿದ್ದು ಆಕೆಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಪ್ರಧಾನಿಯವರ ಇಂತಹ ಪ್ರೋತ್ಸಾಹಕರ ಮಾತುಗಳು ಮುಂದಿನ ದಿನಗಳಲ್ಲಿ ತನ್ನ ಗುರಿ ತಲುಪಲು ಸಹಾಯವಾಗುತ್ತದೆ ಎನ್ನುತ್ತಾಳೆ.
ಬೆನ್ನುಮೂಳೆಯ ಸ್ನಾಯುಕ್ಷೀಣತೆ ಸಮಸ್ಯೆಯಿಂದ ಬಳಲುತ್ತಿರುವ ಅನುಷ್ಕಾ ಪಾಂಡೆ ಎಂಬ ವಿದ್ಯಾರ್ಥಿನಿ ಬಗ್ಗೆ ಕೇಳಿದ್ದೇನೆ. ಆಕೆಯ ನ್ಯೂನತೆ ಕಲಿಕೆಯಲ್ಲಿ ಹಿಂದೆ ಉಳಿಯುವಂತೆ ಮಾಡಿಲ್ಲ. ಇಡೀ ಭಾರತಕ್ಕೆ ಅತ್ಯುನ್ನತ ಸ್ಥಾನ ಪಡೆದಿದ್ದಾಳೆ ಎಂದು ಪ್ರಧಾನಿ ಮನ್ ಕಿ ಬಾತ್ ನಲ್ಲಿ ಶ್ಲಾಘಿಸಿದ್ದರು.
ವಿಜ್ಞಾನ ವಿಷಯದಲ್ಲಿ ಪಿಯುಸಿಗೆ ಸೇರಿಕೊಂಡಿರುವ ಅನುಶ್ಕಾ ಐಐಟಿ ಸೇರಿಕೊಂಡು ಸಾಫ್ಟ್ ವೇರ್ ಎಂಜಿನಿಯರ್ ಆಗುವ ಕನಸು ಕಾಣುತ್ತಿದ್ದಾಳೆ.