ಯೋಗಿ ಆದಿತ್ಯನಾಥ್ ಸರ್ಕಾರದ ಭ್ರಷ್ಟಾಚಾರವೇ ಕೈರಾನಾ, ನೂರ್ ಪುರದಲ್ಲಿ ಸೋಲಲು ಕಾರಣ: ಬಿಜೆಪಿ ಶಾಸಕರು

ಉತ್ತರ ಪ್ರದೇಶದ ಕೈರಾನಾ ಲೋಕಸಭಾ ಹಾಗೂ ನೂರುಪುರ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲಲು ಯೋಗಿ ಆದಿತ್ಯನಾಥ್...
ಯೋಗಿ  ಆದಿತ್ಯನಾಥ್
ಯೋಗಿ ಆದಿತ್ಯನಾಥ್

ಲಖನೌ: ಉತ್ತರ ಪ್ರದೇಶದ ಕೈರಾನಾ ಲೋಕಸಭಾ ಹಾಗೂ ನೂರುಪುರ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲಲು ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರವೇ ಕಾರಣ ಎಂಬಂತಹ ಆರೋಪಗಳು ಕೇಳಿಬರುತ್ತಿವೆ.

ಬಲೈಯಾ ಮತ್ತು ಹಾರ್ದೋಯಿ ಜಿಲ್ಲೆಯ ಇಬ್ಬರು ಬಿಜೆಪಿ ಶಾಸಕರು ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ್ದಾರೆ. ಆದರೆ, ಭ್ರಷ್ಟಾಚಾರವನ್ನು ತಡೆಗಟ್ಟುವಲ್ಲಿ  ಯೋಗಿ ಆದಿತ್ಯನಾಥ್ ಸರ್ಕಾರ ವಿಫಲವಾಗಿದ್ದು, ಬಿಜೆಪಿ ಸೋಲಲು ಇದೇ ಪ್ರಮುಖ ಕಾರಣವಾಯಿತು ಎಂದು ಅವರು ಆರೋಪಿಸಿದ್ದಾರೆ.

ಭ್ರಷ್ಟಾಚಾರ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಕ್ಯಾಬಿನೆಟ್ ಸಚಿವ ಓಂ ಪ್ರಕಾಶ್  ರಾಜ್ಬರ್ ಹಾಗೂ  ಭಾರತೀಯ ಸಮಾಜ ಪಕ್ಷದ  ಅಧ್ಯಕ್ಷ ಸುಹೇಲ್ ದೇವೊ ಕೂಡಾ ಬಿಜೆಪಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಾರೆ.

ರಾಜ್ಯಸರ್ಕಾರದ ಅಧಿಕಾರಿಗಳು ಭ್ರಷ್ಟಾಚಾರಿಗಳಾಗಿದ್ದಾರೆ ಎಂದು ಗೊಪಾಮಾವು  ಕ್ಷೇತ್ರದ ಬಿಜೆಪಿ ಶಾಸಕ  ಶ್ಯಾಮ್ ಪ್ರಕಾಶ್ ಆರೋಪಿಸಿದ್ದಾರೆ.  ಸರ್ಕಾರದ ಬಗ್ಗೆ ರೈತರಿಗೆ ಸಮಾಧಾನವಿಲ್ಲ, ಇದಲ್ಲದೇ ಅನೇಕ ಕಾರಣಗಳಿಂದಾಗಿ ಬಿಜೆಪಿ ಸೋಲು ಅನುಭವಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಸರ್ಕಾರದ ಬಗ್ಗೆ ವಿರೋಧವಿಲ್ಲ, ಆದರೆ, ಅಧಿಕಾರಿಗಳು ಸರಿಯಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಮೋದಿ ದೇಶದಲ್ಲಿಯೇ ಅತ್ಯಂತ ಹೆಚ್ಚಿನ ಪ್ರಸಿದ್ಧ ನಾಯಕರಾಗಿದ್ದು, ಬಿಜೆಪಿ ಹಾಗೂ ಅವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬುದಾಗಿ ಶ್ಯಾಮ್ ಪ್ರಕಾಶ್  ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ನಾಲ್ಕು ಸಾಲಿನ ಪದ್ಯ ಬರೆದಿದ್ದಾರೆ. ಕೈರಾನಾ ಸೋಲಿನ ಬಳಿಕ ಸುರೇಂದ್ರ ಸಿಂಗ್ ಸಹ ಈ ಸಂಬಂಧ ಪ್ರಶ್ನೆ ಮಾಡಿದ್ದಾರೆ.

ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸರ್ಕಾರದ ಯೋಜನೆಗಳು ಜನರಿಗೆ ತಲುಪುತಿಲ್ಲ ಎಂದು ಬಿಜೆಪಿ ಶಾಸಕ ಆರೋಪಿಸಿದ್ದಾರೆ. ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿಗಳು ಸೂಕ್ತ ಕ್ರಮ ಕೈಗೊಳ್ಳದೆ ಇದ್ದರೆ 2019ರಲ್ಲಿ ಜನರು ಬಿಜೆಪಿಯನ್ನು ಬೆಂಬಲಿಸುವುದಿಲ್ಲ, ಮೋದಿಯ ಎಲ್ಲಾ ಉತ್ತಮ ಕೆಲಸಗಳು ವ್ಯರ್ಥವಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com