ಎಲ್ಲರಿಗೂ ಸರ್ಕಾರ ಭದ್ರತೆ ನೀಡಲು ಸಾಧ್ಯವಿಲ್ಲ: ಅತ್ಯಾಚಾರ ಕುರಿತು ಗೋವಾ ಬಿಜೆಪಿ ಮುಖಂಡರ ಹೇಳಿಕೆ

ಸರ್ಕಾರವೇ ಎಲ್ಲರಿಗೂ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಗೋವಾ ಬಿಜೆಪಿ ಮಹಿಳಾ ವಿಭಾಗದ ಮುಖಂಡರಾದ ಸುಲಕ್ಷಣ ಸಾವಂತ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪಣಜಿ: ಸರ್ಕಾರವೇ ಎಲ್ಲರಿಗೂ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಗೋವಾ ಬಿಜೆಪಿ ಮಹಿಳಾ ವಿಭಾಗದ ಮುಖಂಡರಾದ ಸುಲಕ್ಷಣ ಸಾವಂತ್ ಹೇಳಿದ್ದಾರೆ.
ದಕ್ಷಿಣ ಗೋವಾ ಬೀಚ್ ನಲ್ಲಿ 20 ವರ್ಷದ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ  ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸುಲಕ್ಷಣ ಸಾವಂತ್ ಅವರು, ರಾಜ್ಯದ ಪ್ರತಿಯೊಬ್ಬರಿಗೂ ಸರ್ಕಾರವೇ ಭದ್ರತೆ ನೀಡಲು ಸಾಧ್ಯವಿಲ್ಲ. ಮೊದಲು ನಮ್ಮ ಮನಃಸ್ಥಿತಿ ಬದಲಿಸಿಕೊಳ್ಳಬೇಕಿದೆ ಎಂದು ಹೇಳುವ ಮೂಲಕ ಜವಾಬ್ದಾರಿಯಿಂದ ನುಣಿಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಅಂತೆಯೇ ಸ್ಥಳೀಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ಅತ್ಯಾಚಾರದ ವೇಳೆ ಸ್ಥಳದಲ್ಲಿದ್ದ ಯಾರಾದರೂ ಇದನ್ನು ಗಮನಿಸಿ ಅತ್ಯಾಚಾರಿಗಳನ್ನು ತಡೆಯಬಹುದಿತ್ತು. ಅದನ್ನು ಬಿಟ್ಟು ಪೊಲೀಸರು ಮತ್ತು ಸರ್ಕಾರಕ್ಕಾಗಿ ಕಾಯುವ ಅವಶ್ಯಕತೆ ಇರಲಿಲ್ಲ. ಪ್ರತಿಯೊಬ್ಬ ಮಹಿಳೆಯೂ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು. ಆಗ ಮಾತ್ರ ಇತಂಹ ಕೃತ್ಯಗಳನ್ನು ತಡೆಯಬಹುದು. ಅಂತೆಯೇ ಅಪರಾಧ ಪ್ರಕರಣಗಳು ಹೆಚ್ಚಿರುವ ಬೀಚ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಸಾವಂತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇನ್ನು ಗೋವಾ ಬಿಜೆಪಿ ಮುಖಂಡರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ. ಈ ಬಗ್ಗೆ ಮಾತನಾಡಿರುವ ಗೋವಾ ಕಾಂಗ್ರೆಸ್ ಅಧ್ಯಕ್ಷ ಪ್ರತಿಮಾ ಕೌಟಿನ್ಹೋ ಅವರು, ಬಿಜೆಪಿ ಮಹಿಳಾ ವಿಭಾಗದ ಮುಖಂಡರ ಹೇಳಿಕೆ ನಿಜಕ್ಕೂ ಅಸಹ್ಯಕರ. ಆಕೆ ಈಗಲೇ ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕಳೆದ ಮೇ 25ರಂದು ಗೋವಾ ಬೀಚ್ ನಲ್ಲಿ 20 ವರ್ಷದ ಯುವತಿಯನ್ನು ದುಷ್ಕರ್ಮಿಗಳು ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com