
ನವದೆಹಲಿ: 2018 ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯ (CLAT) ಕೌನ್ಸಿಲಿಂಗ್ ಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಈ ವಿಷಯವನ್ನು ಸೋಮವಾರ ಮತ್ತೆ ವಿಚಾರಣೆ ನಡೆಸುವುದಾಗಿ ನ್ಯಾಯಾಧೀಶರಾದ ಆದರ್ಶ ಕುಮಾರ್ ಗೋಯೆಲ್ ಮತ್ತು ಅಶೋಕ್ ಭೂಷಣ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
ಕಳೆದ ವಾರ ಕ್ಲಾಟ್ 2018 ಪರೀಕ್ಷೆ ಫಲಿತಾಂಶ ಪ್ರಕಟಣೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ ನಂತರ ಸುಪ್ರೀಂಕೋರ್ಟ್ ನಲ್ಲಿ ಮತ್ತೆ ಈ ವಿಚಾರ ವಿಚಾರಣೆಗೆ ಬಂದಿದೆ. 19 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಕಾನೂನು ವಿಷಯದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪ್ರವೇಶಕ್ಕಾಗಿ ಪರೀಕ್ಷೆಯನ್ನು ನಡೆಸಲಾಗಿತ್ತು.
ಮೇ 13 ರಂದು ನಡೆದಿದ್ದ ಪರೀಕ್ಷೆಯನ್ನು ಅಸಿಂಧುಗೊಳಿಸಿ ಮರು ಪರೀಕ್ಷೆ ನಡೆಸುವಂತೆ ನಿರ್ದೇಶಿಸಬೇಕೆಂದು ಕೋರಿ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ಸಲ್ಲಿಸಿದ್ದ ಆರು ಅರ್ಜಿಗಳ ವಿಚಾರಣೆ ಇದಾಗಿದೆ.
ಈ ವರ್ಷದ ಮೇ 31 ರಂದು ಕ್ಲಾಟ್ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿತ್ತು.ಕೊಚ್ಚಿಯ ಮುಂದುವರೆದ ಕಾನೂನು ಅಧ್ಯಯನ - ಎನ್ ಯುಎಎಲ್ ಎಸ್ ಈ ಪರೀಕ್ಷೆಯನ್ನು ನಡೆಸಿತ್ತು.
ಆನ್ ಲೈನ್ ಪರೀಕ್ಷೆ ವೇಳೆಯಲ್ಲಿ ಅಭ್ಯರ್ಥಿಗಳು ಸಾಕಷ್ಟು ತಾಂತ್ರಿಕ ತೊಂದರೆ ಎದುರಿಸಿದ್ದರಿಂದ ಕಳೆದ ತಿಂಗಳು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಪರೀಕ್ಷಾ ಕೇಂದ್ರಗಳಲ್ಲಿನ ಸಿಬ್ಬಂದಿಯಿಂದ ಸೂಕ್ತ ಮಾರ್ಗದರ್ಶನ , ಅಗತ್ಯ ಸೌಕರ್ಯ ಸಿಗದೆ ವಿದ್ಯಾರ್ಥಿಗಳು ತೀವ್ರ ತೊಂದರೆ ಎದುರಿಸುವಂತಾಗಿತ್ತು.
Advertisement