ಆರ್'ಎಸ್ಎಸ್ ಸಮಾರಂಭಕ್ಕೆ ಭಾಗಿ: ಪ್ರಣಬ್ ಅವರಿಂದ ಇದನ್ನು ನಿರೀಕ್ಷಿಸಿರಲಿಲ್ಲ; ಅಹಮದ್ ಪಟೇಲ್
ಆರ್ ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಲುವಾಗಿ ನಾಗ್ಪುರಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತೆರಳಿರುವುದು ಇದೀಗ ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಪ್ರಣಬ್ ಅವರಿಂದ ಇದನ್ನು ನಿರೀಕ್ಷಿಸಿರಲಿಲ್ಲ...
ನವದೆಹಲಿ; ಆರ್ ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಲುವಾಗಿ ನಾಗ್ಪುರಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತೆರಳಿರುವುದು ಇದೀಗ ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಪ್ರಣಬ್ ಅವರಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿಯವರ ರಾಜಕೀಯ ಸಲಹೆಗಾರ ಅಹಮದ್ ಪಟೇಲ್ ಅವರು ಗುರುವಾರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ನಾಗ್ಪುರದಲ್ಲಿ ನಡೆಯುತ್ತಿರುವ ಆರ್'ಎಸ್ಎಸ್ ಸಮಾರಂಭಕ್ಕೆ ಪ್ರಣಬ್ ಮುಖರ್ಜಿಯವರು ಭೇಟಿ ನೀಡುತ್ತಿದ್ದು, ಈ ರೀತಿಯ ಬೆಳವಣಿಗೆಯನ್ನು ಪ್ರಣಬ್ ಮುಖರ್ಜಿಯವರಿಂದ ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.
ಜೂ.07 ರಂದು ಆರ್ ಎಸ್ಎಸ್ ಕೇಂದ್ರ ಶಾಖೆಯಲ್ಲಿ ಆರ್ ಎಸ್ಎಸ್ ನ ಸಂಘ್ ಶಿಕ್ಷಾ ವರ್ಗ್ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಮಾಜಿ ರಾಷ್ಟ್ರಪತಿ ಹಾಗೂ ಕಾಂಗ್ರೆಸ್ ನಾಯಕರೂ ಆಗಿದ್ದ ಪ್ರಣಬ್ ಮುಖರ್ಜಿಯವರು ಭಾಗವಹಿಸುತ್ತಿರುವುದು ಸೈದ್ಧಾಂತಿಕ ಕಾರಣಗಳಿಂದಾಗಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಜಾತ್ಯಾತೀತತೆಯ ಕಾರಣಗಳಿಂದಾಗಿ ಆರ್'ಎಸ್ ಎಸ್ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ಕಾಂಗ್ರೆಸ್ ನಾಯಕರು ಪ್ರಣಬ್ ಮುಖರ್ಜಿ ಅವರಿಗೆ ಮನವಿ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮುಖರ್ಜಿ ತಾವು ಆರ್ ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಕ್ಕೆ ವ್ಯಕ್ತವಾದ ಆಕ್ಷೇಪಕ್ಕೆ ನಾಗ್ಪುರದಲ್ಲೇ ಉತ್ತರಿಸುವುದಾಗಿ ಹೇಳಿದ್ದರು.