ರಾಯಪುರ್: ಛತ್ತೀಸ್ ಗಢದ ದಂಗೆ ಪೀಡಿತ ಬಿಜಾಪುರ್ ಜಿಲ್ಲೆಯಲ್ಲಿ ಶುಕ್ರವಾರ ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ ನಕ್ಸಲ್ ಕಮಾಂಡರ್ ನನ್ನು ಹತ್ಯೆ ಮಾಡಲಾಗಿದೆ.
ಭೈರಾಮಗಢ ಪೊಲೀಸ್ ಠಾಣಾ ವ್ಯಾಪ್ತಿಯ ಜರಮೊಂಗಿಯಾಗಿ ಅರಣ್ಯದಲ್ಲಿ ಇಂದು ಬೆಳಗ್ಗೆ ಜಿಲ್ಲಾ ಪೊಲೀಸ್ ಪಡೆ ಮತ್ತು ಸ್ಥಳೀಯ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಕ್ಸಲ್ ಕಮಾಂಡರ್ ಮೊತಿ ಫರ್ಸಾ(28)ನನ್ನು ಹತ್ಯೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮೋಹಿತ್ ಗರ್ಗ್ ಅವರು ಪಿಟಿಐಗೆ ತಿಳಿಸಿದ್ದಾರೆ.
ಪೊಲೀಸರು ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಸುಮಾರು 25ರಿಂದ 30 ನಕ್ಸಲರು ಇದ್ದಕ್ಕಿದಂತೆ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರು. ಸುಮಾರು 1 ಗಂಟೆಗಳ ಕಾಲ ಪ್ರತಿದಾಳಿ ನಡೆಸಿದ ಪೊಲೀಸರು, ನಕ್ಸಲ್ ಕಮಾಂಡರ್ ನನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿವೆ ಎಂದು ಅವರು ಹೇಳಿದ್ದಾರೆ.
ಹತ್ಯೆಯಾದ ನಕ್ಸಲ್ ಕಮಾಂಡರ್ ನಿಂದ 7.62 ಎಂಎಂ ಪಿಸ್ತೂಲ್ ಹಾಗೂ ಮೂರು ಜೀವಂತ ಗುಂಡುಗಳು, ಸ್ಫೋಟಕ ವಸ್ತು, ಟಿಫಿನ್ ಬಾಂಬ್, ನಕ್ಸಲ್ ಸಾಹಿತ್ಯವನ್ನು ಜಪ್ತಿ ಮಾಡಲಾಗಿದೆ ಎಂದು ಗರ್ಗ್ ಅವರು ತಿಳಿಸಿದ್ದಾರೆ.