ಸರ್ಕಾರದ 10 ಜಂಟಿ-ಕಾರ್ಯದರ್ಶಿ ಹುದ್ದೆಗಳಿಗೆ ಖಾಸಗಿ ಕ್ಷೇತ್ರದಿಂದ ನೇರ ನೇಮಕ: ಕೇಂದ್ರ ಸರ್ಕಾರ

ಖಾಸಗಿ ವಲಯದಿಂದ ಪ್ರತಿಭಾನ್ವಿತರನ್ನು ಸೆಳೆಯುವ ಉದ್ದೇಶದಿಂದ ನರೇಂದ್ರ ಮೋದಿ ನೇತೃತ್ವದ ...
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ: ಖಾಸಗಿ ವಲಯದಿಂದ ಪ್ರತಿಭಾನ್ವಿತರನ್ನು ಸೆಳೆಯುವ ಉದ್ದೇಶದಿಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 10 ಹಿರಿಯ ಮಟ್ಟದ ಅಧಿಕಾರಿಗಳ ಹುದ್ದೆಗೆ ಖಾಸಗಿ ವಲಯದಿಂದ ನಿರ್ದಿಷ್ಟ ಅವಧಿಗೆ ನೇರ ನೇಮಕಾತಿ ಮಾಡಲು ಅರ್ಜಿ ಆಹ್ವಾನಿಸಿದೆ.

ಸರ್ಕಾರದ ವಿವಿಧ ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ಜಾರಿಗೆ ತರುವ ಜಂಟಿ ಕಾರ್ಯದರ್ಶಿಗಳ ಹುದ್ದೆಯನ್ನು ಇದುವರೆಗೆ ಸಾಮಾನ್ಯವಾಗಿ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ನೀಡಲಾಗುತ್ತಿತ್ತು.

ಇನ್ನು ಮುಂದೆ ಸರ್ಕಾರ ಖಾಸಗಿ ವಲಯದ ಪ್ರತಿಭಾವಂತರಿಗೆ ಸಹ ಮನ್ನಣೆ ನೀಡಲು ಮುಂದಾಗಿದೆ. ಸರ್ಕಾರದ ಈ ಯೋಜನೆಗೆ ಲ್ಯಾಟರಲ್ ಎಂಟ್ರಿ ಎಂದು ಕರೆಯಲಾಗುತ್ತದೆ. ಇದು ಹಲವು ಸಮಯಗಳಿಂದ ಸರ್ಕಾರದ ಮಟ್ಟದಲ್ಲಿ ಚರ್ಚೆಯಲ್ಲಿತ್ತು. ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ. ಸರ್ಕಾರದ ಆಡಳಿತಕ್ಕೆ ಹೊಸ ಆಲೋಚನೆಗಳು ಮತ್ತು ಹೊಸ ದೃಷ್ಟಿಕೋನ ತರುವುದು ಇದರ ಉದ್ದೇಶವಾಗಿದೆ ಎನ್ನುತ್ತದೆ ಕೇಂದ್ರ ಸರ್ಕಾರ.

ಸಿಬ್ಬಂದಿ ತರಬೇತಿ ಇಲಾಖೆಯ ಅಧಿಸೂಚನೆ ಪ್ರಕಾರ, ಅದ್ವಿತೀಯ ಪ್ರತಿಭಾವಂತ 10 ಅಭ್ಯರ್ಥಿಗಳನ್ನು ಸರ್ಕಾರದ ಇಲಾಖೆಗಳಿಗೆ ಜಂಟಿ ಕಾರ್ಯದರ್ಶಿಯನ್ನಾಗಿ ಸೇರಿಸಿಕೊಳ್ಳುವ ಯೋಜನೆಯಲ್ಲಿದೆ. ಖಾಸಗಿ ವಲಯಗಳಲ್ಲಿ ತುಲನಾತ್ಮಕ ಮಟ್ಟದಲ್ಲಿ ಕೆಲಸ ಮಾಡುವ ವ್ಯಕ್ತಿಗಳು, ಸಲಹಾ ಸಂಘಟನೆಗಳು, ಅಂತಾರಾಷ್ಟ್ರೀಯ ಮತ್ತು ಬಹುರಾಷ್ಟ್ರೀಯ ಸಂಘಟನೆಗಳಲ್ಲಿ ಕಾರ್ಯನಿರ್ವಹಿಸಿದ 40 ವರ್ಷದೊಳಗಿನ ಮತ್ತು ಕನಿಷ್ಠ 15 ವರ್ಷಗಳ ಕಾಲ ಕೆಲಸದ ಅನುಭವ ಹೊಂದಿರುವವರು ಸರ್ಕಾರದ 10 ವಿವಿಧ ಇಲಾಖೆಗಳ ಜಂಟಿ ಕಾರ್ಯದರ್ಶಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಸಂಪೂರ್ಣ ಗುತ್ತಿಗೆ ಆಧಾರಿತವಾಗಿದ್ದು 3ರಿಂದ 5 ವರ್ಷಗಳವರೆಗೆ ಇರುತ್ತದೆ. ಸರ್ಕಾರದ ಕಂದಾಯ, ಹಣಕಾಸಿನ ಸೇವೆಗಳು, ಆರ್ಥಿಕ ವ್ಯವಹಾರಗಳು, ವಾಣಿಜ್ಯ ಮತ್ತು ನಾಗರಿಕ ವಿಮಾನಯಾನ ಹೀಗೆ 10 ಇಲಾಖೆಗಳಿಗೆ ನೇಮಕಾತಿ ನಡೆಯಲಿದೆ.

ಈ ಹುದ್ದೆಗೆ ಈಗಾಗಲೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳ ಸಾರ್ವಜನಿಕ ವಲಯಗಳಲ್ಲಿ ಸಮಾನ ಮಟ್ಟದಲ್ಲಿ ಕೆಲಸ ಮಾಡುತ್ತಿರುವ, ಸ್ವಾಯತ್ತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಗಿ ಸಹ ಮುಕ್ತವಾಗಿದ್ದು ಅವರು ಕೂಡ ಅರ್ಜಿ ಸಲ್ಲಿಸಬಹುದು.

40 ವರ್ಷದೊಳಗಿನ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಅರ್ಹರು. ಹೆಚ್ಚುವರಿ ವಿದ್ಯಾಭ್ಯಾಸ ಗಳಿಸಿದರೆ ಇನ್ನೂ ಉತ್ತಮ. ಇವರಿಗೆ ತಿಂಗಳಿಗೆ 1.4 ಲಕ್ಷ ರೂಪಾಯಿಗಳಿಂದ 2.18 ಲಕ್ಷ ರೂಪಾಯಿಗಳವರೆಗೆ ವೇತನ ನೀಡಲಾಗುತ್ತದೆ. ಜತೆಗೆ ಭತ್ಯೆಗಳು ಕೂಡ ಇರುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com