ಜನರ ಜೀವನದಲ್ಲಿ ರೈತರ ಪಾತ್ರ ಅತಿ ದೊಡ್ಡದು: ಪ್ರಧಾನಿ ನರೇಂದ್ರ ಮೋದಿ

ದೇಶದಲ್ಲಿ ಆಹಾರ ಭದ್ರತೆಯಲ್ಲಿ ರೈತರ ಶ್ರಮ ಮತ್ತು ಕೊಡುಗೆ ಅಪಾರವಾಗಿದೆ. ಜನರು ಬದುಕಿ ಬಾಳಲು ರೈತರು ಅತ್ಯಗತ್ಯವಾಗಿದ್ದಾರೆ ಎಂದು ಪ್ರಧಾನ ...
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ದೇಶದಲ್ಲಿ ಆಹಾರ ಭದ್ರತೆಯಲ್ಲಿ ರೈತರ ಶ್ರಮ ಮತ್ತು ಕೊಡುಗೆ ಅಪಾರವಾಗಿದೆ. ಜನರು ಬದುಕಿ ಬಾಳಲು ರೈತರು ಅತ್ಯಗತ್ಯವಾಗಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ನವೋ ಆಪ್ ಮೂಲಕ ಅವರು ಇಂದು ದೇಶದ ರೈತರೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿ ದೇಶದ 600ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಈ ಡಿಜಿಟಲ್ ಮಾಧ್ಯಮ ನೆರವಾಗಬಹುದು ಎಂದು ಆಶಾವಾದ ವ್ಯಕ್ತಪಡಿಸಿದರು.

ನಮ್ಮ ದೇಶದಲ್ಲಿ ರೈತರನ್ನು ಅವರ ಪಾಡಿಗೆ ಬಿಟ್ಟುಬಿಡಲಾಗಿದೆ. ಅವರ ಅಭಿವೃದ್ಧಿಗೆ ಹೆಚ್ಚಿನ ಕೆಲಸ ಮಾಡಿಲ್ಲ ಎಂದು ಅಭಿಪ್ರಾಯಪಟ್ಟ ಪ್ರಧಾನಿಗಳು, ರೈತರಿಗೆ ಸಹಾಯ ಮಾಡಲು ತಂತ್ರಜ್ಞಾನದ ಸಂಶೋಧನೆಗಳ ಅಗತ್ಯವಿದೆ ಎಂದರು. ರೈತರು ತಾವು ಬೆಳೆದ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುವಂತಾಗಬೇಕಾದರೆ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪುವಂತಾಗಬೇಕು ಎಂದರು.

2022ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸಲು ನೆರವಿನ ಅಗತ್ಯವಿದೆ ಎಂದರು. ಪ್ರಧಾನಿಯವರ ವಿಡಿಯೊ ಕಾನ್ಫರೆನ್ಸ್ ನಲ್ಲಿ ಕರ್ನಾಟಕ, ಸಿಕ್ಕಿಮ್, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ಭಾಗಗಳ ರೈತರು ಭಾಗವಹಿಸಿದ್ದರು. ಕೃಷಿಯಲ್ಲಿನ ಸಾಧನೆ ಮತ್ತು ಸವಾಲುಗಳ ಬಗ್ಗೆ ಚರ್ಚೆ ನಡೆಸಲಾಯಿತು.

ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗಬೇಕು. ಧಾನ್ಯಗಳು ಗದ್ದೆಯಲ್ಲಿ ಹಾಳಾಗಿ ಹೋಗದಂತೆ ರಕ್ಷಿಸಬೇಕು ಮತ್ತು ರೈತರಿಗೆ ಕೃಷಿಯ ಜೊತೆಗೆ ಪರ್ಯಾಯ ಆದಾಯ ಮೂಲ ಕೂಡ ಇರಬೇಕು, ಕಳೆದ ಮೂರು ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಸಮಗ್ರ ಬದಲಾವಣೆಗಳಾಗಿವೆ ಎಂದರು.

ಕೇಂದ್ರ ಬಜೆಟ್ ನಲ್ಲಿ ಕೃಷಿಗೆ ಸುಮಾರು 2 ಲಕ್ಷ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದೇವೆ. ಧಾನ್ಯ, ಹಣ್ಣು, ತರಕಾರಿ ಮತ್ತು ಹಾಲುಗಳ ಉತ್ಪಾದನೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ನೀಲಿ ಕ್ರಾಂತಿಯ ಮೂಲಕ ಮೀನುಗಾರಿಕೆ ವಲಯದಲ್ಲಿ ಶೇಕಡಾ 26ರಷ್ಟು ಪ್ರಗತಿಯಾಗಿದೆ. ಪಶುಸಂಗೋಪನೆ ವಲಯದಲ್ಲಿ ಕೂಡ ಶೇಕಡಾ 24ರಷ್ಟು ಏರಿಕೆ ಕಂಡುಬಂದಿದೆ ಎಂದು ಪ್ರಧಾನಿ ಹೇಳಿದರು.

ರೈತರಿಗೆ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವಂತಾಗಲು ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ನಿರ್ದಿಷ್ಟ ಬೆಳೆಗಳಿಗೆ ನಿಗದಿಪಡಿಸಿದ್ದು ಅದು ರೈತರ ಬೆಳೆಯ ಖರ್ಚಿನ ಕನಿಷ್ಠ ಒಂದೂವರೆ ಪಟ್ಟು ಹೆಚ್ಚಾಗಿರುತ್ತದೆ ಎಂದರು.

ಕಳೆದ ವರ್ಷ ಕೃಷಿ ಉತ್ಪನ್ನಗಳಲ್ಲಿ ಹೆಚ್ಚಳ ಕಂಡುಬಂದಿದೆ ಎಂದ ಪ್ರಧಾನಿ, 2017-18ರಲ್ಲಿ ಆಹಾರ ಧಾನ್ಯಗಳ ಉತ್ಪಾದನೆ 280 ದಶಲಕ್ಷ ಟನ್ ಗೂ ಅಧಿಕವಾಗಿತ್ತು. ಸರಾಸರಿ ಉತ್ಪನ್ನ 2010ರಿಂದ 2014ರವರೆಗೆ 250 ದಶಲಕ್ಷ ಟನ್ ಗಳಿದ್ದವು. ಅದೇ ರೀತಿ ಧಾನ್ಯಗಳ ಉತ್ಪಾದನೆ ಶೇಕಡಾ 10.5ರಷ್ಟು ಮತ್ತು ತೋಟಗಾರಿಕೆ ವಲಯಗಳಲ್ಲಿ ಶೇಕಡಾ 15ರಷ್ಟು ಹೆಚ್ಚಳ ಕಂಡುಬಂದಿದೆ ಎಂದರು.

ಕೇಂದ್ರ ಸರ್ಕಾರ ಇ-ನಾಮ್ ಎಂಬ ಆನ್ ಲೈನ್ ವೇದಿಕೆಯನ್ನು ಆರಂಭಿಸಿದ್ದು ಈ ಮೂಲಕ ರೈತರು ತಮ್ಮ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುವಂತಾಗುತ್ತದೆ, ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದು ಎಂದು ಹೇಳಿದರು.

ಪ್ರಧಾನ ಮಂತ್ರಿ ಕೃಷಿ ಸಿಂಚಯ್ ಯೋಜನೆಯಡಿ ಶೇಕಡಾ 99ರಷ್ಟು ನೀರಾವರಿ ಯೋಜನೆಗಳನ್ನು ದೇಶಾದ್ಯಂತ ಇದುವರೆಗೆ ಪೂರ್ಣಗೊಳಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com