ತೂತುಕುಡಿ ತಾಮ್ರ ಸಂಸ್ಕರಣಾ ಘಟಕದಲ್ಲಿ ಆಸಿಡ್ ಸೋರಿಕೆ ತೀವ್ರ: ವೇದಾಂತ

ತೂತುಕುಡಿಯಲ್ಲಿರುವ ತನ್ನ ತಾಮ್ರ ಸಂಸ್ಕರಣಾ ಘಟಕದಲ್ಲಿ ಸಲ್ಫರಿಕ್ ಆಸಿಡ್ ಸೋರಿಕೆ ತೀವ್ರವಾಗಿದ್ದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ತೂತುಕುಡಿ: ತೂತುಕುಡಿಯಲ್ಲಿರುವ ತನ್ನ ತಾಮ್ರ ಸಂಸ್ಕರಣಾ ಘಟಕದಲ್ಲಿ ಸಲ್ಫರಿಕ್ ಆಸಿಡ್ ಸೋರಿಕೆ ತೀವ್ರವಾಗಿದ್ದು, ಅದರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ವೇದಾಂತ ಕಂಪನಿ ಬುಧವಾರ ತಮಿಳುನಾಡು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. 
ಸಣ್ಣ ಪ್ರಮಾಣದಲ್ಲಿ ಆಸಿಡ್ ಸೋರಿಕೆಯಾಗುತ್ತಿದ್ದು, ಸುರಕ್ಷತೆ ದೃಷ್ಟಿಯಿಂದ ಸಂಗ್ರಹ ಟ್ಯಾಂಕ್ ಗಳನ್ನು ಖಾಲಿ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಭಾನುವಾರ ಜಿಲ್ಲಾಡಳಿತ ಹೇಳಿತ್ತು.
ಪೈಪ್ ತುದಿಗಳಲ್ಲಿ ತೀವ್ರ ಸೋರಿಕೆ ಇದೆ ಮತ್ತು ಆಸಿಡ್ ಶೇಖರಣಾ ಟ್ಯಾಂಕ್ ಸುತ್ತಲೂ ಸಂಗ್ರಹಿಸಿದ ಆಸಿಡ್ ಸಹ ಸೋರಿಕೆಯಾಗುತ್ತಿದೆ ಎಂದು ವೇದಾಂತ ಕಂಪನಿ ಇಂದು ಮದ್ರಾಸ್ ಹೈಕೋರ್ಟ್ ಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ.
ಘಟಕ ನಿರ್ವಹಣೆಗಾಗಿ ಸೀಮಿತ ವಿದ್ಯುತ್ ಮರುಸಂಪರ್ಕ ಬಯಸಿ ಕಂಪನಿ ಇಂದು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ತೂತುಕುಡಿ ತಾಮ್ರ ಸಂಸ್ಕರಣಾ ಘಟಕದಲ್ಲಿ ಆಸಿಡ್ ಸೋರಿಕೆಯಾಗುತ್ತಿದೆ ಎಂದು ಉಲ್ಲೇಖಿಸಿದೆ.
ಈ ಮಧ್ಯೆ, ಜಿಲ್ಲಾಡಳಿತ ತನ್ನ ಹಿಂದಿನ ಹೇಳಿಕೆಯನ್ನೇ ಪುನರುಚ್ಚರಿಸಿದ್ದು, ಸೋರಿಕೆ ಸಣ್ಣ ಪ್ರಮಾಣದಲ್ಲಿದೆ. ಆದರೂ ಸುರಕ್ಷತೆ ದೃಷ್ಟಿಯಿಂದ ಎಲ್ಲಾ ಟ್ಯಾಂಕ್ ಗಳಲ್ಲಿರುವ ಸಲ್ಫರಿಕ್ ಆಸಿಡ್ ಅನ್ನು ಖಾಲಿ ಮಾಡಲಾಗುತ್ತಿದೆ ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿ ಸಂದೀಪ್ ನಂದುರಿ ಅವರು ಹೇಳಿದ್ದಾರೆ.
ಹಿಂಸಾತ್ಮಕ ಪ್ರತಿಭಟನೆಯ ನಂತರ ತಮಿಳುನಾಡು ಸರ್ಕಾರ ತೂತುಕುಡಿಯ ಸ್ಟೆರ್ಲೈಟ್ ತಾಮ್ರ ಸಂಸ್ಕರಣಾ ಘಟಕವನ್ನು ಶಾಶ್ವತವಾಗಿ ಮುಚ್ಚಲು ತಮಿಳುನಾಡು ಸರ್ಕಾರ ಆದೇಶಿಸಿತ್ತು. ಅಲ್ಲದೆ ಘಟಕಕ್ಕೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿತ್ತು.
ಮೇ.22 ರಂದು ತೂತುಕುಡಿಯಲ್ಲಿ ಸ್ಟೆರ್ಲೈಟ್ ತಾಮ್ರ ಘಟಕದ ಕಾರ್ಯನಿರ್ವಹಣೆಯನ್ನು ವಿರೋಧಿಸಿ ರೈತರು ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ನಡೆದ ಪೊಲೀಸ್‌ ಗೋಲಿಬಾರ್ ನಲ್ಲಿ 13 ಮಂದಿ ಮೃತಪಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com