ಭದ್ರತಾ ಕ್ರಮ ಕೈಗೊಳ್ಳಲಾಗಿದ್ದು, ಅಮರನಾಥ ಯಾತ್ರೆ ವೇಳೆ ಆತಂಕಗೊಳ್ಳುವ ಅಗತ್ಯವಿಲ್ಲ; ಜಮ್ಮು-ಕಾಶ್ಮೀರ ರಾಜ್ಯಪಾಲ
ಅಮರನಾಥ ಯಾತ್ರೆ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಈ ಹಿನ್ನಲೆಯಲ್ಲಿ ಭದ್ರತೆಗಳನ್ನು ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಎನ್ಎನ್ ವೊಹ್ರಾ ಅವರು ಶುಕ್ರವಾರ ಪರಿಶೀಲನೆ ನಡೆಸಿದ್ದಾರೆ...
ನವದೆಹಲಿ: ಅಮರನಾಥ ಯಾತ್ರೆ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಈ ಹಿನ್ನಲೆಯಲ್ಲಿ ಭದ್ರತೆಗಳನ್ನು ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಎನ್ಎನ್ ವೊಹ್ರಾ ಅವರು ಶುಕ್ರವಾರ ಪರಿಶೀಲನೆ ನಡೆಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಹಲವೆಡೆ ಭದ್ರತೆಯನ್ನು ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆತಂಕಗೊಳ್ಳುವ ಅಗತ್ಯವಿಲ್ಲ. ಅಮರನಾಥ ಯಾತ್ರೆಗೆ ಎಲ್ಲಾ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಯಾತ್ರೆ ಶಾಂತಿಯುತವಾಗಿ ನಡೆಯಲಿದೆ ಎಂದು ಹೇಳಿದ್ದಾರೆ.
ಇದರಂತೆ ಸಿಆರ್'ಪಿಎಫ್ ಕೂಡ ಹೇಳಿಕೆ ನೀಡಿದ್ದು, ಭದ್ರತಾ ಪಡೆಗಳು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲಿದೆ. ಯಾವುದೇ ರೀತಿಯ ದಾಳಿ ನಡೆದರೂ ಅವುಗಳನ್ನು ಎದುರಿಸಲು ಸಿದ್ಧರಿದ್ದೇವೆಂದು ತಿಳಿಸಿದ್ದಾರೆ.
ಅಮರನಾಥ ಯಾತ್ರೆಗೆ ಉಗ್ರರ ಬೆದರಿಕೆಗಳಿರುವ ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರೂ ಕೂಡ ಶೀಘ್ರದಲ್ಲಿಯೇ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುವ ಸಾಧ್ಯತೆಗಳಿದ್ದು, ಈ ವೇಳೆ ಭದ್ರತೆಗಳನ್ನು ಪರಿಶೀಲನೆ ನಡೆಸಲಿದ್ದಾರೆಂದು ವರದಿಗಳು ತಿಳಿಸಿವೆ.
ಜೂನ್ 28 ರಿಂದ ಹಿಮಾಲಯದ ತಪ್ಪಲಲ್ಲಿ ಇರುವ ಅಮರನಾಥ ದೇಗುಲಕ್ಕೆ ಯಾತ್ರೆ ಆರಂಭಗೊಳ್ಳಲಿದೆ. ಎರಡು ತಿಂಗಳುಗಳ ಕಾಲ ಯಾತ್ರೆ ನಡೆಯಲಿದ್ದು, ಆಗಸ್ಟ್ ಅಂತ್ಯದಲ್ಲಿ ಯಾತ್ರೆ ಅಂತ್ಯಗೊಳ್ಳಲಿದೆ.