ನವದೆಹಲಿ: ನಾಗರಿಕ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಕೋಟ್ಯಂತರ ರುಪಾಯಿ ನಷ್ಟದಲ್ಲಿದ್ದು ನಿಧಿ ಸಂಗ್ರಹಣೆಗಾಗಿ ಕೇಂದ್ರ ಸರ್ಕಾರ ಮುಂಬೈನಲ್ಲಿರುವ ಏರ್ ಇಂಡಿಯಾದ ಕಟ್ಟಡವನ್ನು ಮಾರಲು ಯೋಚಿಸಿದೆ.
ದೇಶದ ಅತೀ ದೊಡ್ಡ ಬಂದರೂ ಸರ್ಕಾರಿ ಸಾಮ್ಯದ ಜವಾಹರ್ ನೆಹರ ಪೋರ್ಟ್ ಟ್ರಸ್ಟ್(ಜೆಎನ್ಪಿಟಿ)ಗೆ ಮುಂಬೈನಲ್ಲಿರುವ ಐತಿಹಾಸಿಕ ಏರ್ ಇಂಡಿಯಾ ಕಟ್ಟಡವನ್ನು ಮಾರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.
ಅಧಿಕೃತ ಮೂಲಗಳ ಪ್ರಕಾರ, ಈ ಪ್ರಸ್ತಾವನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಂಗೀಕಾರ ಪಡೆದಿದ್ದು ಈ ಕ್ರಮಗಳನ್ನು ಕೈಗೊಳ್ಳಲು ಮಂತ್ರಿಮಂಡಲ ಸಮಿತಿಯನ್ನು ರಚಿಸಲಾಗಿದೆ.
ಮುಂಬೈನ ನಾರಿಮನ್ ಪಾಯಿಂಟ್ ನಲ್ಲಿರುವ 23 ಅಂತಸ್ತಿನ ಏರ್ ಇಂಡಿಯಾದ ಈ ಕಟ್ಟಡ ಏರ್ಲೈನ್ಸ್ ನ ಪ್ರಧಾನ ಕಚೇರಿಯಾಗಿದೆ. ಇದು ಏರ್ ಇಂಡಿಯಾದ ಪ್ರಧಾನ ಆಸ್ತಿಯಾಗಿದ್ದು ಹೆಚ್ಚಿನ ಮೊತ್ತಕ್ಕೆ ಮಾರಾಟವಾಗುವ ಸಾಧ್ಯತೆ ಇದೆ.
ಕಟ್ಟಡದ ಮೌಲ್ಯವನ್ನು ನಿರ್ಧರಿಸಲು ನಾಗರಿಕ ವಿಮಾನಯಾನ ಮತ್ತು ಶಿಪ್ಪಿಂಗ್ ಸಚಿವಾಲಯಗಳ ಕಾರ್ಯದರ್ಶಿಗಳನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಲಾಗಿದೆ.
ಏರ್ ಇಂಡಿಯಾ ಮತ್ತು ಜೆಎನ್ಪಿಟಿ ಎರಡು ನಾಗರಿಕ ವಿಮಾನಯಾನ ಮತ್ತು ಶಿಪ್ಪಿಂಗ್ ಸಚಿವಾಲಯಗಳ ಅಡಿಯಲ್ಲಿ ಬರುತ್ತವೆ.