ಲಾಲೂ ಗೆ ನಿತೀಶ್ ಕುಮಾರ್ ಫೋನ್ ಕರೆ ಮತ್ತೆ 'ರಾಜಿ'ಯ ಸೂಚನೆಯೇ?

ಇಬ್ಬರೂ ಪ್ರತ್ಯೇಕವಾದ ಸುಮಾರು ಒಂದು ವರ್ಷದ ನಂತರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ...
ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್ ಯಾದವ್ (ಸಂಗ್ರಹ ಚಿತ್ರ)
ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್ ಯಾದವ್ (ಸಂಗ್ರಹ ಚಿತ್ರ)

ಪಾಟ್ನಾ: ಇಬ್ಬರೂ ಪ್ರತ್ಯೇಕವಾದ ಸುಮಾರು ಒಂದು ವರ್ಷದ ನಂತರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಗೆ ದೂರವಾಣಿ ಕರೆ ಮಾಡಿದ್ದು, ನಿತೀಶ್ ಕುಮಾರ್ ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ನಿತೀಶ್ ಕುಮಾರ್ ಪಕ್ಷ ಜೆಡಿಯು ಮತ್ತು ಬಿಜೆಪಿ ಮಧ್ಯೆ ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆಗೆ ಸಂಬಂಧಪಟ್ಟಂತೆ ಭಿನ್ನಾಭಿಪ್ರಾಯ ತಲೆದೋರಿದೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿರುವ ಮಧ್ಯೆ ನಿತೀಶ್ ಅವರ ಈ ನಡೆ ಕುತೂಹಲ ಮೂಡಿಸಿದೆ.

ಮುಂಬೈಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲೂ ಪ್ರಸಾದ್ ಯಾದವ್ ಅವರಿಗೆ ಜೆಡಿಯು ರಾಷ್ಟ್ರಾಧ್ಯಕ್ಷರಾಗಿರುವ ನಿತೀಶ್ ಕುಮಾರ್ ದೂರವಾಣಿ ಕರೆ ಮಾಡಿದ್ದಾರೆ.ಈ ಹಿಂದೆ ಲಾಲೂ ಪ್ರಸಾದ್ ಯಾದವ್ ಅವರು ಅನಾರೋಗ್ಯ ಸಂಬಂಧ ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರೂ ಕೂಡ ಮುಖ್ಯಮಂತ್ರಿ ನಿತೀಶ್ ಕುಮಾರ್ ಕರೆ ಮಾಡಿ ಮಾತನಾಡಿರಲಿಲ್ಲ.

ಆದರೆ ಇದು ಕೇವಲ ಸೌಜನ್ಯದ ಫೋನ್ ಕರೆ ಮಾತ್ರ ಎಂದು ಜೆಡಿಯು ಮತ್ತು ಬಿಜೆಪಿ ನಾಯಕರು ಹೇಳಿದ್ದು, ರಾಜಕೀಯ ಕುರಿತು ಯಾವುದೇ ಮಾತುಕತೆಯಾಗಿಲ್ಲ ಎಂದು ತಿಳಿಸಿದ್ದಾರೆ. ಆದರೆ ಖಾಸಗಿ ಮೂಲಗಳು ಹೇಳುವ ಪ್ರಕಾರ ನಿತೀಶ್ ಕುಮಾರ್ ಅವರು ಮತ್ತೆ ಆರ್ ಜೆಡಿಯೊಂದಿಗೆ ಸೇರಲು ಒಲವು ತೋರಿಸುತ್ತಿದ್ದಾರೆ.

ಲಾಲೂ ಪ್ರಸಾದ್ ಯಾದವ್ ಅವರ ಕಿರಿಯ ಪುತ್ರ ಹಾಗೂ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಜೆಡಿಯು ಜೊತೆ ಆರ್ ಜೆಡಿ ಮತ್ತೆ ಮೈತ್ರಿ ಮಾಡಿಕೊಳ್ಳುವುದಕ್ಕೆ ತಮ್ಮ ಸಂಪೂರ್ಣ ವಿರೋಧವಿದೆ ಎಂದು ಹೇಳಿರುವ ಕೆಲವೇ ಹೊತ್ತಿನಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ದೂರವಾಣಿ ಕರೆ ಮಾಡಿದ್ದಾರೆ. ಮತ್ತೆ ನಿತೀಶ್ ಕುಮಾರ್ ಅವರನ್ನು ಕರೆದು ಮಹಾ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ತೇಜಸ್ವಿ ಯಾದವ್ ಹೇಳಿದ್ದರು.

ತೇಜಸ್ವಿ ಯಾದವ್ ಈ ರೀತಿ ಅಪ್ರಬುದ್ಧ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕೆಂದು ಎಂದಿರುವ ಜೆಡಿಯು ರಾಷ್ಟ್ರೀಯ ಕಾರ್ಯದರ್ಶಿ ಕೆ ಸಿ ತ್ಯಾಗಿ ಎನ್ ಡಿಎ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಾಗಿದೆ, ನಾವು ಅವರ ಜೊತೆ ಚೆನ್ನಾಗಿದ್ದೇವೆ ಎಂದಿದ್ದಾರೆ.

ನಿತೀಶ್ ಕುಮಾರ್ ಅವರು ಲಾಲೂ ಪ್ರಸಾದ್ ಅವರ ಜೊತೆ ರಾಜಕೀಯಕ್ಕೆ ಸಂಬಂಧಪಟ್ಟ ಮಾತುಕತೆ ನಡೆಸಲಿಲ್ಲ. ಅವರ ಆರೋಗ್ಯ ವಿಚಾರಿಸಿ ಫೋನ್ ಕರೆ ಮಾಡಿದ್ದರಷ್ಟೆ. ಯಾವುದೇ ರಾಜಕೀಯ ಒತ್ತಡವಿದ್ದರೂ ಕೂಡ ಕಳೆದ ಮೇಯಲ್ಲಿ ಲಾಲೂ ಪುತ್ರನ ಮದುವೆ ಸಮಾರಂಭದಲ್ಲಿ ಮುಖ್ಯಮಂತ್ರಿ ಭಾಗವಹಿಸಿದ್ದರು, ಹಾಗಾಗಿ ಇದರಲ್ಲಿ ವಿಶೇಷ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ತ್ಯಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com