ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಪಿಂಚಣಿ ದಾನವಲ್ಲ: ಮದ್ರಾಸ್ ಹೈಕೋರ್ಟ್

ಸ್ವಾತಂತ್ರ್ಯ ಹೋರಾಟಗಾರರೊಬ್ಬರಿಗೆ ಪಿಂಚಣಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಚಾಟಿ ಬೀಸಿದ್ದು, ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಪಿಂಚಣಿ ದಾನವಲ್ಲ...
ಮದ್ರಾಸ್ ಹೈಕೋರ್ಟ್
ಮದ್ರಾಸ್ ಹೈಕೋರ್ಟ್
90 ವರ್ಷದ ಸ್ವಾತಂತ್ರ್ಯ ಹೋರಾಟಗಾರರೊಬ್ಬರಿಗೆ ಪಿಂಚಣಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಚಾಟಿ ಬೀಸಿದ್ದು, ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಪಿಂಚಣಿ ದಾನವಲ್ಲ ಎಂದು ಹೇಳಿದೆ. 
ಬಡತನದಲ್ಲಿ ಜೀವಿಸುತ್ತಿರುವ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಿ ಪಿಂಚಣಿ ನೀಡುವುದು ಸರ್ಕಾರದ ಆದ್ಯ ಕರ್ತವ್ಯ ಎಂದು ಮದ್ರಾಸ್ ಹೈಕೋರ್ಟ್ ಸ್ಪಷ್ಟವಾಗಿ ಉಲ್ಲೇಖಿಸಿದ್ದು, ತಮಿಳುನಾಡಿನ ಪಿಎಸ್ ಪೆರಿಯ್ಯ ಎಂಬುವವರಿಗೆ ಬಾಕಿ ಮೊತ್ತದ ಸಮೇತ ಪಿಂಚಣಿ ನೀಡಬೇಕು ಎಂದು ಸೂಚನೆ ನೀಡಿದೆ. 
ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗಿಯಾಗಿದ್ದ ಪಿಎಸ್ ಪೆರಿಯ್ಯ,  1943-46 ವರೆಗೆ ಈಗಿನ ಕರ್ನಾಟಕದ ಅಲಿಪುರಂ ನ ಜೈಲಿನಲ್ಲಿ ಸೆರೆ ವಾಸ ಅನುಭವಿಸಿದ್ದರು. ರಾಜ್ಯ ಸರ್ಕಾರದಿಂದ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಲಾಗುವ ಪಿಂಚಣಿ ಯೋಜನೆಯಡಿ ಪಿಂಚಣಿ ಪಡೆಯುತ್ತಿದ್ದರೂ, ಕೇಂದ್ರ ಸರ್ಕಾರದ ಸ್ವಾತಂತ್ರ್ಯ ಸೈನಿಕ್ ಪಿಂಚಣಿ ಯೋಜನೆಯಡಿ ಪಿಂಚಣಿಗಾಗಿ ಮಧುರೈನ ಜಿಲ್ಲಾಧಿಕಾರಿಗಳಿಗೆ 2013 ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಸೂಕ್ತ ಸಾಕ್ಷ್ಯಗಳಿಲ್ಲ ಎಂಬ ಕಾರಣ ನೀಡಿ, ಅರ್ಜಿ ತಿರಸ್ಕೃತಗೊಂಡಿದ್ದ ಹಿನ್ನೆಲೆಯಲ್ಲಿ ಮಧುರೈನಲ್ಲಿರುವ ಮದ್ರಾಸ್ ಹೈಕೋರ್ಟ್  ಪೀಠಕ್ಕೆ ಮನವಿ ಸಲ್ಲಿಸಿ ಜಿಲ್ಲಾಧಿಕಾರಿಗಳ ಆದೇಶವನ್ನು ರದ್ದುಗೊಳಿಸಿ ಪಿಂಚಣಿ ಕೊಡಿಸಬೇಕೆಂದು ಕೋರಿದ್ದರು.
ಆದರೆ ಕಾನೂನು ಸಮರದಲ್ಲಿ ಗೆಲ್ಲುವ ಮುನ್ನವೇ 2014 ರಲ್ಲಿ ಪಿ.ಎಸ್ ಪೆರಿಯ್ಯ ನಿಧನರಾದರು. 2014 ರ ಏಪ್ರಿಲ್ 28 ರಂದು ಹೈಕೋರ್ಟ್ ಪೀಠ ಸ್ವಾತಂತ್ರ್ಯ ಹೋರಾಟಗಾರರ ಅರ್ಜಿಯನ್ನು ಪರಿಗಣಿಸಿ, ಅರ್ಜಿ ಸಲ್ಲಿಸಿದ ದಿನಾಂಕದಿಂದ ಮೃತಪಟ್ಟ ದಿನಾಂಕದವರೆಗಿನ ಪಿಂಚಣಿ ಮೊತ್ತವನ್ನು ಅವರ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿತ್ತು. ಆದರೆ ಕೋರ್ಟ್ ಆದೇಶದ ಹೊರತಾಗಿಯೂ ಸಹ ಕೇಂದ್ರ ಸರ್ಕಾರ ಪಿಂಚಣಿ ನೀಡಲು ನಿರಾಕರಿಸಿ ಮೇಲ್ಮನವಿ ಸಲ್ಲಿಸಿತ್ತು. 
ವಾದ, ವಿವಾದಗಳನ್ನು ಆಲಿಸಿದ ನ್ಯಾಯಾಲಯದ ನ್ಯಾ.ಕೆ ರವಿಚಂದ್ರಬಾಬು, ಟಿ ಕೃಷ್ಣವಲ್ಲಿ ಅವರಿದ್ದ ವಿಭಾಗೀಯ ಪೀಠ, ಸರ್ಕಾರದ ಮೇಲ್ಮನವಿಯನ್ನು ತಿರಸ್ಕರಿಸಿದ್ದು, ಸ್ವಾತಂತ್ರ್ಯ ಹೋರಾಟಗಾರರ ಶ್ರಮದಿಂದ ನಾವು ಇಂದು ಅಧಿಕಾರ ನಡೆಸುತ್ತಿದ್ದೇವೆ ಎಂಬುದನ್ನು ಸರ್ಕಾರವೂ ಸೇರಿದಂತೆ ಎಲ್ಲರೂ ಅರಿತುಕೊಳ್ಳಾಬೇಕು. ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಪಿಂಚಣಿ ದಾನವಲ್ಲ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com