ಲಖನೌ: ಗೋರಖ್‌ಪುರ್ ಮತ್ತು ಪುಲ್‌ಪುರ್ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಬದ್ಧ ವೈರಿ ಪಕ್ಷಗಳಾದ ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿ ಮಾಡಿಕೊಳ್ಳಲಿವೆ ಎಂಬ ಮಾಧ್ಯಮಗಳ ವರದಿಯನ್ನು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಎಸ್ಪಿ ಜತೆ ಮೈತ್ರಿ ಕುರಿತು ಮಾಧ್ಯಮ ವರದಿ ಆಧಾರ ರಹಿತ ಮತ್ತು ಸುಳ್ಳು ಸುದ್ದಿ ಎಂದು ಮಾಯಾವತಿ ಹೇಳಿದ್ದಾರೆ.
ಕರ್ನಾಟಕ ಹೊರತುಪಡಿಸಿ ರಾಜ್ಯದಲ್ಲಿ ಬಿಎಸ್ಪಿ ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿಲ್ಲ ಎಂದು ಮಾಯಾವತಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಒಂದು ವೇಳೆ ಮೈತ್ರಿ ಮಾಡಿಕೊಂಡರೇ ಬಹಿರಂಗವಾಗಿ ಮಾಡಿಕೊಳ್ಳುತ್ತೇವೆ. ರಹಸ್ಯವಾಗಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಮಾಯಾವತಿ ಅವರು ರಾಜ್ಯಸಭೆಗೆ ಆಯ್ಕೆಯಾಗಲು ಎಸ್‌ಪಿ ಶಾಸಕರು ಬೆಂಬಲ ನೀಡಲಿದ್ದಾರೆ ಎಂದು ಹೇಳಲಾಗಿದೆ. ಇದೇ ಒಪ್ಪಂದದ ಮೇರೆಗೆ ಮೈತ್ರಿ ಮಾತುಕತೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖ್‌ಪುರ್ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಚುನಾವಣೆ ಎದುರಾಗಿದೆ. ಇಲ್ಲಿ ಬಿಜೆಪಿ ಯಿಂದ ಉಪೇಂದ್ರ ಶುಕ್ಲಾ ಕಣಕ್ಕಿಳಿದಿದ್ದು, ಕಾಂಗ್ರೆಸ್ ನಿಂದ ಸುರ್‌ಹಿತ ಚಟರ್ಜಿ ಕರಿಮ್ ಅವರು ಕಣಕ್ಕಿಳಿಯಲಿದ್ದಾರೆ.
ಮಾರ್ಚ್ 11 ರಂದು 2 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು ಮಾರ್ಚ್ 14 ರಂದು ಫಲಿತಾಂಶ ಪ್ರಕಟವಾಗಲಿದೆ.