ಕಾಶ್ಮೀರ ಸರ್ಕಾರ ಯೂ ಟರ್ನ್: ಶೋಪಿಯಾನ್ ಎನ್ ಕೌಂಟರ್ ಎಫ್ಐಆರ್ ನಲ್ಲಿ ಮೇಜರ್ ಆದಿತ್ಯಾ ಹೆಸರಿಲ್ಲ

ಪ್ರತಿಭಟನಾಕಾರರ ಮೇಲಿನ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಕಾಶ್ಮೀರ ಸರ್ಕಾರ ಯೂಟರ್ನ್ ಹೊಡೆದಿದ್ದು, ಪ್ರಕರಣ ಸಂಬಂಧ ದಾಖಲಾಗಿರುವ ಎಫ್ ಐಆರ್ ನಲ್ಲಿ ಮೇಜರ್ ಆದಿತ್ಯಾ ಕುಮಾರ್ ಅವರ ಹೆಸರೇ ನಾಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: ಶೋಪಿಯಾನ್ ನಲ್ಲಿ ಕಳೆದ ಜನವರಿ 27ರಂದು ಪ್ರತಿಭಟನಾಕಾರರ ಮೇಲೆ ನಡೆದ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಕಾಶ್ಮೀರ ಸರ್ಕಾರ ಯೂಟರ್ನ್ ಹೊಡೆದಿದ್ದು, ಪ್ರಕರಣ ಸಂಬಂಧ ದಾಖಲಾಗಿರುವ ಎಫ್ ಐಆರ್ ನಲ್ಲಿ ಮೇಜರ್ ಆದಿತ್ಯಾ ಕುಮಾರ್ ಅವರ ಹೆಸರೇ ನಾಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಶೋಪಿಯಾನ್ ನ ಗನ್ವಾಪೋರಾ ಪ್ರದೇಶದಲ್ಲಿ ಜನವರಿ 27ರಂದು ನಡೆದಿದ್ದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್ ಐಆರ್ ನಲ್ಲಿ ಮೇಜರ್ ಆದಿತ್ಯಾ ಕುಮಾರ್ ಅವರ ಹೆಸರೇ ನಾಪತ್ತೆಯಾಗಿದೆ. ಕಲ್ಲು ತೂರಾಟದಲ್ಲಿ ನಿರತರಾಗಿದ್ದ ಪ್ರತಿಭಟನಾಕಾರರ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದರು. ಹಾಗಾಗಿ, ಮೇಜರ್‌ ಆದಿತ್ಯಾ ಕುಮಾರ್‌ ಮೇಲೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. ಆದರೆ ಇದೀಗ ಬಹಿರಂಗವಾಗಿರುವ ವಸ್ತುಸ್ಥಿತಿ ವರದಿ ಅನ್ವಯ ಎಫ್ ಆರ್ ನಿಂದ ಮೇಜರ್ ಆದಿತಾ ಕುಮಾರ್ ಅವರ ಹೆಸರನ್ನು  ತೆಗೆದು ಹಾಕಲಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣವನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದ್ದು, ಮೇಜರ್ ಆದಿತ್ಯಾ ಕುಮಾರ್ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಕರಮ್ ವೀರ್ ಸಿಂಗ್ ಅವರ ಪುತ್ರರಾಗಿದ್ದಾರೆ. ಇದೇ ಕರ್ನಲ್ ಕರಮ್ ವೀರ್ ಸಿಂಗ್ ಅವರು ಪ್ರಕರಣದಿಂದ ತಮ್ಮ ಪುತ್ರ ಹೆಸರನ್ನು ಕೈ ಬಿಡಬೇಕು ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಮಗ ತನ್ನ ಕರ್ತವ್ಯ ನಿರ್ವಹಿಸಿದ್ದಾನೆ. ಅವನ ಮೇಲೆ ದೂರು ದಾಖಲಿಸಿರುವುದು ತಪ್ಪು ಮತ್ತು ನಿರಂಕುಶ ನಿರ್ಧಾರವಾಗಿದೆ. ಉದ್ರಿಕ್ತ ಜನರ ಗುಂಪಿನಿಂದ ಸುರಕ್ಷಿತವಾಗಿ ಹೊರಬರಲು ಸೈನಿಕರು ಗುಂಡು ಹಾರಿಸಿದ್ದಾರೆ ಎಂದು ಕರ್ಮವೀರ್‌ ಸಿಂಗ್‌ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಈ ಸಂಬಂಧ ಈ ಹಿಂದೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಭಾರತೀಯ ಸೇನೆಯ ಮೇಜರ್‌ ಮೇಲೆ ರಾಜ್ಯ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಆಧರಿಸಿ ಕ್ರಮ ಜರುಗಿಸಲು ಸುಪ್ರೀಂಕೋರ್ಟ್‌ ನ ತ್ರಿಸದಸ್ಯ ಪೀಠ ತಡೆ ನೀಡಿತ್ತು. 
ಈ ಸಂಬಂಧ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಸೂಚನೆ ನೀಡಿದ್ದ ಸುಪ್ರೀಂ ಕೋರ್ಟ್, ಮೇಜರ್ ಆದಿತ್ಯಾ ಭಾರತೀಯ ಸೇನೆಯ ಕರ್ತವ್ಯ ನಿರತ ಯೋಧರಾಗಿದ್ದಾರೆ. ಅವರನ್ನು ಸಾಮಾನ್ಯ ಅಪರಾಧಿಗಳಂತೆ ನೋಡಿಕೊಳ್ಳಬಾರದು ಎಂದು ನಿರ್ದೇಶನ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ಮೇಜರ್ ಆದಿತ್ಯಾ ಅವರ ಹೆಸರು ಎಫ್ ಐಆರ್ ನಿಂದ ನಾಪತ್ತೆಯಾಗಿದ್ದು, ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಅವರ ಹೆಸರನ್ನು ಎಫ್ ಐಆರ್ ನಿಂದ ತೆಗೆದು ಹಾಕಿದೆ ಎನ್ನಲಾಗಿದೆ.
ಇನ್ನು ಗರ್ವಾಲ್‌ ರೈಫಲ್‌ ಘಟಕದ ಮೇಜರ್‌ ಆದಿತ್ಯಾ ಅವರ ತಂಡ ಸೊಫಿಯಾನದಲ್ಲಿ ಮಾಡಿದ ಫೈರಿಂಗ್‌ನಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದರು. ಕೊಲೆ ಮತ್ತು ಕೊಲೆಗೆ ಯತ್ನದ ಆರೋಪದಲ್ಲಿ ಪೊಲೀಸರು ಗರ್ವಾಲ್‌ ತಂಡದ ಮೇಲೆ ದೂರು ದಾಖಲಿಸಿಕೊಂಡಿದ್ದರು. ಈ ಘಟನೆ ಕುರಿತು ಸೇನೆ ಫೆ.1 ರಂದು ಪೊಲೀಸರಿಗೆ ಸ್ಪಷ್ಟನೆ ನೀಡಿತ್ತು.  ‘ಸ್ಥಳೀಯರು ಅಧಿಕಾರಿಗಳ ಮೇಲೆ  ನಡೆಸಬಹುದಾಗಿದ್ದ ಹಲ್ಲೆ, ವಾಹನಗಳಿಗೆ ಆಗುತ್ತಿದ್ದ ಹಾನಿ ಮತ್ತು ಯೋಧರ ಶಸ್ತ್ರಾಸ್ತಗಳನ್ನು ಕಿತ್ತುಕೊಳ್ಳುವುದನ್ನು ತಡೆಯಲು ಗುಂಡು ಹಾರಿಸಲಾಯಿತು’ ಎಂದು ಸ್ಪಷ್ಟನೆಯಲ್ಲಿ ತಿಳಿಸಿದೆ. ಕರ್ತವ್ಯ ನಿರತ ಯೋಧರ ಹಕ್ಕುಗಳನ್ನು ರಕ್ಷಿಸಿ, ಅವರಿಗೆ ಸೂಕ್ತ ರಕ್ಷಣೆ ಒದಗಿಸುವಂತ ನಿಯಮಗಳನ್ನು ರೂಪಿಸಲು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಇನ್ನು ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 24ರಂದು ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com