ಎರಡನೇ ದಿನದ ಕಲಾಪವನ್ನೂ ಬಲಿಪಡೆದ ಪಿಎನ್ ಬಿ ಹಗರಣ

ಲೋಕಸಭೆಯಲ್ಲಿ ಎರಡನೇ ದಿನವೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಮತ್ತಿತರ ವಿಷಯಗಳು ಪ್ರತಿಧ್ವನಿಸಿ ಕಲಾಪವನ್ನೂ ಬಲಿ ಪಡೆದುಕೊಂಡವು.
ಲೋಕಸಭೆಯಲ್ಲಿ ವಿವಿಧ ಪಕ್ಷಗಳು ನಡೆಸಿದ ಪ್ರತಿಭಟನೆಯ ಚಿತ್ರ
ಲೋಕಸಭೆಯಲ್ಲಿ ವಿವಿಧ ಪಕ್ಷಗಳು ನಡೆಸಿದ ಪ್ರತಿಭಟನೆಯ ಚಿತ್ರ

ದೆಹಲಿ: ಲೋಕಸಭೆಯಲ್ಲಿ ಎರಡನೇ ದಿನವೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಮತ್ತಿತರ ವಿಷಯಗಳು ಪ್ರತಿಧ್ವನಿಸಿ  ಕಲಾಪವನ್ನೂ ಬಲಿ ಪಡೆದುಕೊಂಡವು.

ಬ್ಯಾಕಿಂಗ್ ವಲಯದಲ್ಲಿನ ಹಗರಣಕ್ಕೆ ಪ್ರಧಾನಿ ನರೇಂದ್ರಮೋದಿ ನೇರ ಹೊಣೆ ಎಂದು ಕಾಂಗ್ರೆಸ್ ಹಾಗೂ ತೃಣಮೂಲಕ ಕಾಂಗ್ರೆಸ್ ಕಾರ್ಯಕರ್ತರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರೆ,ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ಆಂಧ್ರಪ್ರದೇಶದ ಸದಸ್ಯರು ಪ್ರತಿಭಟನೆ ನಡೆಸಿದರು.

ಮರಾಠಿ  ಭಾಷೆಗೆ ಶಾಸ್ತ್ರಿಯ ಸ್ಥಾನಮಾನಕ್ಕಾಗಿ ಆಗ್ರಹಿಸಿ ಎನ್ ಡಿಎ ಮಿತ್ರ ಪಕ್ಷ ಶಿವಸೇನೆ ಧರಣಿ ನಡೆಸಿದರೆ,  ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ತಮಿಳುನಾಡಿನ ಎಐಎಡಿಎಂಕೆ ಸದಸ್ಯರು ಆಗ್ರಹಿಸಿದರು.  

ಈ ಮಧ್ಯೆ ಮಾತನಾಡಿದ ಸಂಸದೀಯ ವ್ಯವಹಾರ ಸಚಿವ ಅನಂತ್ ಕುಮಾರ್ ಬ್ಯಾಂಕಿಂಗ್ ವಲಯದಲ್ಲಿನ ಅಕ್ರಮ ಹಣಕಾಸು ವ್ಯವಹಾರ ಕುರಿತಂತೆ ಚರ್ಚೆ ನಡೆಸಲು ಸಿದ್ಧರಿದ್ದೀವಿ. ಹಣಕಾಸು ಸಚಿವ ಅರುಣ್ ಜೇಟ್ವಿ  ಉತ್ತರ ನೀಡಲಿದ್ದಾರೆ ಎಂದು  ಸಂಸದೀಯ ವ್ಯವಹಾರ ಸಚಿವ ಅನಂತ್ ಕುಮಾರ್ ಹೇಳಿದ್ದರೂ  ಲೋಕಸಭೆಯಲ್ಲಿ ಗದ್ದಲ ಉಂಟಾಗಿ ಕಲಾಪ ನಡೆದಂತಾಯಿತು.

ಬಜೆಟ್ ಅಧಿವೇಶನದ ಮುಂದುವರೆದ ಭಾಗದಲ್ಲಿ  ಪ್ರಮುಖವಾಗಿರುವ ವಿತ್ತೀಯ ಬಿಲ್ ಅನುಮೋದನೆಯಾಗಬೇಕಿದ್ದು,ಕಲಾಪ ಸುಗಮವಾಗಿ ನಡೆಯಲು ಪ್ರತಿಯೊಬ್ಬ ಸದಸ್ಯರು ಸಹಕರಿಸಬೇಕೆಂದು ಅನಂತ್ ಕುಮಾರ್ ಮನವಿ ಮಾಡಿಕೊಂಡರು.

ಯುಪಿಎ ಸರ್ಕಾರದ ಅವಧಿಯಲ್ಲಿಯೇ ಈ ಅವ್ಯವಹಾರ ಕಂಡುಬಂದಿದೆ. ಚರ್ಚೆಗೆ ಅವಕಾಶ ಮಾಡಿಕೊಡದ ಕಾಂಗ್ರೆಸ್ ಗೆ  ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನತೆಯೇ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ರಾಷ್ಟ್ರೀಯ ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂಪಾಯಿ ಸಾರ್ವಜನಿಕರ ಹಣ ದೋಚಿ ವಿದೇಶಕ್ಕೆ ಪಲಾಯನ ಮಾಡುತ್ತಿದ್ದಾರೆ.  ಈ ಬಗ್ಗೆ ಚರ್ಚೆಯ ಅಗತ್ಯವಿದೆ ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಕಲಾಪದಲ್ಲಿ ಪಾಲ್ಗೊಂಡಿದ್ದರು.

  ಗದ್ದಲ, ಕೋಲಾಹಲದ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಯವರೆಗೂ ಕಲಾಪವನ್ನು ಸ್ಪೀಕರ್ ಸುಮಿತ್ರಾ ಮಹಾಜನ್  ಮುಂದೂಡಿದ್ದರು. ಮತ್ತೆ ಸಮಾವೇಶಗೊಂಡಾಗಲೂ ಇದೇ ಪರಿಸ್ಥಿತಿ ಮುಂದುವರೆಯಿತು. ಸುಗಮ ಕಲಾಪ ಸಾಧ್ಯವಾಗದೆ ಸ್ಪೀಕರ್ ಸುಮಿತ್ರಾ ಮಹಾಜನ್ ನಾಳೆಗೆ ಲೋಕಸಭೆ ಕಲಾಪವನ್ನು ಮುಂದೂಡ್ಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com