ಮುಂದುವರೆದ ವಿಪಕ್ಷಗಳ ಗದ್ದಲ: ರಾಜ್ಯಸಭೆ ಕಲಾಪ ನಾಳೆಗೆ ಮುಂದೂಡಿಕೆ!

ಸಂಸತ್ ನ ಉಭಯ ಸದನಗಳಲ್ಲಿ ಮತ್ತೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ ಕುರಿತ ವಿಪಕ್ಷಗಳ ಗದ್ದಲ ಮುಂದುವರೆದಿದ್ದು, ರಾಜ್ಯಸಭೆ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಸಂಸತ್ ನ ಉಭಯ ಸದನಗಳಲ್ಲಿ ಮತ್ತೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ ಕುರಿತ ವಿಪಕ್ಷಗಳ ಗದ್ದಲ ಮುಂದುವರೆದಿದ್ದು, ರಾಜ್ಯಸಭೆ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಗಿದೆ.
ಇಂದು ಕಲಾಪ ಆರಂಭವಾಗುತ್ತಿದ್ದಂತೆಯೇ ಆಂಧ್ರ ಪ್ರದೇಶದ ಸದಸ್ಯರು ರಾಜ್ಯಕ್ಕೆ ವಿಶೇಷ ಸ್ಥಾನಮನ ನೀಡಬೇಕು ಎಂದು ಬೇಡಿಕೆ ಮುಂದಿಟ್ಟು ಪ್ರತಿಭಟನೆ ನಡೆಸಿದರೆ, ಮತ್ತೊಂದೆಡೆ ತಮಿಳುನಾಡು ಸದಸ್ಯರು ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ ಮುಂದಿಟ್ಟುಕೊಂಡು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ರಾಜ್ಯಸಭೆಯ ಉಪಾಧ್ಯಕ್ಷರಾದ ಪಿಜೆ ಕುರಿಯನ್ ಬೇರೆ ಮಾರ್ಗವಿಲ್ಲದೇ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು. ಮಧ್ಯಾಹ್ನ 2 ಗಂಟೆಗೆ ಕಲಾಪ ಆರಂಭವಾಯಿತಾದರೂ ಮತ್ತದೇ ಪರಿಸ್ಥಿತಿ ಮುಂದುವರೆಯಿತು.
ಈ ವೇಳೆ ಕೇಂದ್ರ ಸಚಿವ ವಿಜಯ್ ಗೋಯಲ್ ಅವರು ಸರ್ಕಾರ ಪ್ರತಿಭಟನಾ ನಿರತ ಸದಸ್ಯರ ಸಮಸ್ಯೆ ಆಲಿಸಲು ಸಿದ್ಧ ಎಂದು ಹೇಳಿದರೂ, ಸದಸ್ಯರು ಪಟ್ಟು ಸಡಿಸಲಿಲ್ಲ. ಇನ್ನು ಶೂನ್ಯ ವೇಳೆಯಲ್ಲಿ ನಡೆದ ಕಲಾಪದ ವೇಳೆ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಜು ಅವರು ಪ್ರಶ್ನೋತ್ತರ ವೇಳೆಯಲ್ಲಿ ಪಾಲ್ಗೊಂಡಿದ್ದಾಗ ತೃಣಮೂಲ ಕಾಂಗ್ರೆಸ್ ಸದಸ್ಯರು ಪಿಎನ್ ಬಿ ವಂಚನೆ ಪ್ರಕರಣವನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಬ್ಯಾಂಕಿಂಗ್ ವಂಚನೆ ಪ್ರಕರಣದ ಹಿಂದೆ ಕೇಂದ್ರ ಸರ್ಕಾರವಿದ್ದು, ಈ ಬಗ್ಗೆ ಕೂಲಂಕುಷ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಈ ವೇಳೆ ಸಭಾಧ್ಯಕ್ಷ ವೆಂಕಯ್ಯನಾಯ್ಜು ಅವರು ಎಷ್ಟೇ ಮನವಿ ಮಾಡಿದರೂ ಸದಸ್ಯರು ಶಾಂತರಾಗಲಿಲ್ಲ. ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ  ನೀರವ್ ಮೋದಿಯನ್ನು ಭಾರತಕ್ಕೆ ವಾಪಸ್ ಕರೆಸುವ ಮತ್ತು ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಬಿಕ್ಕಟ್ಟಿಗೆ ಕಾರಣವಾಗಿರುವ ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ ಸಂಬಂಧ ಸದಸ್ಯರು ಗದ್ದಲ ವೇರ್ಪಡಿಸಿದರು. 
ಒಂದು ಹಂತದಲ್ಲಿ ತಾಳ್ನೆ ಕಳೆದುಕೊಂಡ ಸಭಾಧ್ಯಕ್ಷ ವೆಂಕಯ್ಯ ನಾಯ್ಡು, ಇದೇನೂ ಬಜಾರ್ ಅಲ್ಲ, ಸಂಸತ್ತು ಎಂದು ಸದಸ್ಯರಿಗೆ ಎಚ್ಚರಿಕೆ ನೀಡಿದರು. ಸದಸ್ಯರ ನಡವಳಿಕೆ ನಿಜಕ್ಕೂ ನೋವು ತಂದಿದ್ದು, ಇಂತಹ ಕ್ಷುಲ್ಲಕ ತಂತ್ರಗಾರಿ ಪ್ರದರ್ಶನ ಬೇಡ. ಸಂಸತ್ ನಲ್ಲಿ ಈ ರೀತಿಯ ವರ್ತನೆ ಮಾಡಿ ಜನರಿಗೆ ಹೇಗೆ ಮುಖ ತೋರಿಸುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com