ಲೆನಿನ್, ಪೆರಿಯಾರ್ ಬಳಿಕ ಶ್ಯಾಮ್ ಪ್ರಸಾದ್ ಮುಖರ್ಜಿ ಪ್ರತಿಮೆಗೆ ಹಾನಿ: ಪ್ರಧಾನಿ ಮೋದಿ ತೀವ್ರ ಖಂಡನೆ
ಕಮ್ಯುನಿಸ್ಟ್ ನಾಯಕ ಲೆನಿನ್ ಅವರ ಎರಡು ಪ್ರತಿಮೆ ಹಾಗೂ ತಮಿಳುನಾಡಿನಲ್ಲಿ ಪೆರಿಯಾರ್ ಪ್ರತಿಮೆಯನ್ನು ಧ್ವಂಸ ಮಾಡಿರುವುದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ...
ನವದೆಹಲಿ: ಕಮ್ಯುನಿಸ್ಟ್ ನಾಯಕ ಲೆನಿನ್ ಅವರ ಎರಡು ಪ್ರತಿಮೆ ಹಾಗೂ ತಮಿಳುನಾಡಿನಲ್ಲಿ ಪೆರಿಯಾರ್ ಪ್ರತಿಮೆಯನ್ನು ಧ್ವಂಸ ಪ್ರಕರಣದ ಬೆನ್ನಲ್ಲೇ ಕೋಲ್ಕತಾದ ಕಾಳಿಘಾಚ್ ನಲ್ಲಿರುವ ಶ್ಯಾಮ್ ಪ್ರಸಾದ್ ಮುಖರ್ಜಿ ಪ್ರತಿಮೆಯನ್ನೂ ಧ್ವಂಸ ಮಾಡಲಾಗಿದೆ.
ಪ್ರತಿಮೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಪ್ರತಿಮೆಗಳ ಧ್ವಂಸ ಪ್ರಕರಗಳ ಕುರಿತಂತೆ ಈಗಾಗಲೇ ಗೃಹ ಸಚಿವಾಲಯದೊಂದಿಗೆ ಪ್ರಧಾನಿ ಮೋದಿಯವರು ಮಾತುಕತೆ ನಡೆಸಿದ್ದು, ಘಟನೆ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆಂದು ಗೃಹ ಸಚಿವಾಲಯ ಹೇಳಿದೆ.
ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮೋದಿಯವರು ಸೂಚಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಆಯಾ ರಾಜ್ಯ ಸರ್ಕಾರಗಳು ಎಚ್ಚರ ವಹಿಸಬೇಕು. ಯಾರು ಇಂತಹ ಕೃತ್ಯವೆಸಗುತ್ತಾರೆಯೋ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಗೃಹ ಸಚಿವಾಲಯ ಸೂಚನೆ ನೀಡಿದೆ.