ಕೇಂದ್ರ ಬಜೆಟ್ ನಮ್ಮ ನಿರೀಕ್ಷೆ ಹುಸಿಗೊಳಿಸಿದ್ದು, ಯುದ್ಧ ಸಾಮಗ್ರಿ ಖರೀದಿಗೆ ಹಣದ ಕೊರತೆ ಇದೆ: ಭಾರತೀಯ ಸೇನೆ

ಕೇಂದ್ರ ಸರ್ಕಾರದ 2018ನೇ ಸಾಲಿನ ಬಜೆಟ್ ಕುರಿತ ತಮ್ಮ ನಿರೀಕ್ಷೆಗಳು ಹುಸಿಯಾಗಿದ್ದು, ಅತ್ಯಾಧುನಿಕ ಯುದ್ಧ ಸಾಮಗ್ರಿ ಖರೀದಿಗೆ ಸೇನೆ ಬಳಿ ಸಾಕಷ್ಟು ಹಣವಿಲ್ಲ ಎಂದು ಭಾರತೀಯ ಸೇನೆ ಅಧಿಕಾರಿಗಳು ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಕೇಂದ್ರ ಸರ್ಕಾರದ 2018ನೇ ಸಾಲಿನ ಬಜೆಟ್ ಕುರಿತ ತಮ್ಮ ನಿರೀಕ್ಷೆಗಳು ಹುಸಿಯಾಗಿದ್ದು, ಅತ್ಯಾಧುನಿಕ ಯುದ್ಧ ಸಾಮಗ್ರಿ ಖರೀದಿಗೆ ಸೇನೆ ಬಳಿ ಸಾಕಷ್ಟು ಹಣವಿಲ್ಲ ಎಂದು ಭಾರತೀಯ ಸೇನೆ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಸೇನೆಯ ಭೂಸೇನೆ ಮತ್ತು ವಾಯು ಸೇನೆ ವಿಭಾಗ ಯುದ್ಧ ಸಾಮಗ್ರಿ ಖರೀದಿಗೆ ಸಾಕಷ್ಟು ಹಣದ ಕೊರತೆ ಎದುರಿಸುತ್ತಿದ್ದು, ಯುದ್ಧ ಸಾಮಗ್ರ ಖರೀದಿಗೆ ತಮ್ಮ ಬಳಿ ಸಾಕಷ್ಟು ನಿಧಿ ಇಲ್ಲ ಎಂದು ಭಾರತೀಯ ಸೇನೆ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದೆ. ಈ ಬಗ್ಗೆ ಸಂಸದೀಯ ಸ್ಥಾಯಿ ಸಮಿತಿ ಸೇನೆ ಮನವಿ ಮಾಡಿದ್ದು, ಸುಮಾರು 13 ಪುಟಗಳ ಸುಧೀರ್ಘ ಪತ್ರ ಬರೆದು ಸೇನೆಯ ಸಮಸ್ಯೆಗಳನ್ನು ವಿವರಿಸಿದೆ.
ಸೇನೆಯ ಉಪ ವರಿಷ್ಠಾಧಿಕಾರಿ ಲೆಫ್ಟಿನೆಂಟ್ ಜನರಲ್ ಶರತ್ ಚಂದ್ ಅವರು ಸ್ಥಾಯಿ ಸಮಿತಿಗೆ ಈ ಬಗ್ಗೆ ಪತ್ರ ಬರೆದಿದ್ದು, "ಪಠಾಣ್‌ಕೋಟ್ ಹಾಗೂ ಉರಿ ಭಯೋತ್ಪಾದಕ ದಾಳಿಯ ಬಳಿಕ ತುರ್ತು ಯುದ್ಧ ಸಾಮಗ್ರಿ ಖರೀದಿಗೆ ಹಾಗೂ ಚೀನಾ ಗಡಿಯಲ್ಲಿ ರಸ್ತೆ ನಿರ್ಮಿಸಲು ಸಾಕಷ್ಟು ಹಣವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ವಿತ್ತೀಯ ಕೊರತೆಯಿಂದಾಗಿ ತನ್ನ ಸಾಮರ್ಥ್ಯ ಕುಂಠಿತಗೊಳ್ಳಲು ಕಾರಣವಾಗುತ್ತಿದೆ ಎಂದು ಎಚ್ಚರಿಕೆ ನೀಡಿರುವ ಸೇನೆ, ಪಾಕಿಸ್ತಾನ ಮತ್ತು ಚೀನಾದೊಂದಿಗಿನ ಯುದ್ಧದ ಬೆದರಿಕೆ ವಾಸ್ತವವಾಗಿದ್ದು, ಸೇನೆಯ ಆಧುನೀಕರಣ ಹಾಗೂ ಶಸ್ತ್ರಾಸ್ತ್ರ ಸಾಮರ್ಥ್ಯದ ಕೊರತೆ ನೀಗಿಸುವ ಬಗ್ಗೆ ಗಮನಹರಿಸಬೇಕು ಎಂದು ಸಂಸದೀಯ ಸಮಿತಿಗೆ ಮನವಿ ಮಾಡಿದೆ.
ಪ್ರಸ್ತುತ ನಡೆಯುತ್ತಿರುವ 125 ಯೋಜನೆಗಳಿಗೆ ಹಾಗೂ ತುರ್ತು ಸಶ್ತ್ರಾಸ್ತ್ರ ಹೊಂದುವುದಕ್ಕೆ 29,033 ಕೋಟಿ ರೂ. ಪಾವತಿ ಮಾಡಬೇಕಿತ್ತು. ಆದರೆ, ಮಂಜೂರು ಮಾಡಲಾದ 21,338 ಕೋಟಿ ರೂ. ಯಾವುದಕ್ಕೂ ಸಾಕಾಗುವುದಿಲ್ಲ. 10 ದಿನಗಳ ಕಾಲ ತೀವ್ರ ಯುದ್ಧ ನಡೆದರೆ ಯುದ್ಧ ಸಾಮಾಗ್ರಿ ಸಂಗ್ರಹಿಸಲು 6,380 ಕೋಟಿ ರೂ. ಕೊರತೆ ಬೀಳುತ್ತದೆ ಎಂದು ಸಂಸತ್ತಿಗೆ ಮಂಗಳವಾರ ಸಲ್ಲಿಸಲಾದ ಸರಣಿ ವರದಿಯಲ್ಲಿ ಲೆಫ್ಟಿನೆಂಟ್ ಜನರಲ್ ಶರತ್ ಚಂದ್ ಅವರು ಹೇಳಿದ್ದಾರೆ. 
ಕೇಂದ್ರ ಬಜೆಟ್ ನಮ್ಮ ನಿರೀಕ್ಷೆ ಹುಸಿಗೊಳಿಸಿದೆ
ಇದೇ ವೇಳೆ 2018-19ರ ಬಜೆಟ್ ನಮ್ಮ ನಿರೀಕ್ಷೆ ಹುಸಿಗೊಳಿಸಿದೆ ಎಂದು ಹೇಳಿರುವ ಅವರು, ನಾವೇನು ಸಾಧನೆ ಮಾಡಿದ್ದೇವೆ ಎಂದು ಹೇಳುತ್ತಿದ್ದೆವೆಯೋ ಅಲ್ಲಿ ವಾಸ್ತವವಾಗಿ ಸ್ಪಲ್ಪ ಮಟ್ಟಿನ ಹಿನ್ನಡೆ ಉಂಟಾಗಿದೆ. ಬಜೆಟ್ ಅಂದಾಜಿನ ಅಲ್ಪ ಮಟ್ಟದ ಹೆಚ್ಚಳ ಹಣದುಬ್ಬರ ಹಾಗೂ ತೆರಿಗೆ ಕಟ್ಟುವುದನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಮೇಕ್ ಇನ್ ಇಂಡಿಯಾವನ್ನು ರಕ್ಷಣಾ ವಲಯದಲ್ಲಿ ಆರಂಭಿಸಲು ವಿತ್ತೀಯ ಕೊರತೆ ಅಡ್ಡಿಯಾಗಿದೆ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಸೇನೆ ಒಟ್ಟು 25 ಯೋಜನೆಗಳನ್ನು ಆರಂಭಿಸಲು ಸಿದ್ಧತೆ ನಡೆಸಿದ್ದು, ವಿತ್ತೀಯ ಕೊರತೆಯಿಂದಾಗಿ ನಿಗದಿತ ಫಲಿತಾಂಶ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಸಮಿತಿ ಬಳಿ ಆಲವತ್ತುಕೊಂಡಿದ್ದಾರೆ ಎನ್ನಲಾಗಿದೆ.
ಹಾಲಿ ಇರುವ ಸಾಮರ್ಥ್ಯದೊಂದಿಗೆ ಎರಡೆರಡು ಯುದ್ಧ ಎದುರಿಸುವುದು ಕಷ್ಟ ಸಾಧ್ಯ ಎಂದು ಹೇಳಿರುವ ವಾಯುಸೇನೆ, ಸೇನೆ ಬಳಿ ಇರುವ ಶೇ.68ರಷ್ಟು ಯುದ್ಥ ಸಾಮಗ್ರಿಗಳು ಹಳೆಯದಾಗಿದ್ದು, ಇವುಗಳನ್ನು ತುರ್ತಾಗಿ ಆಧುನೀಕರಿಸುವ ಅವಶ್ಯಕತೆ ಇದೆ ಎಂದು ಹೇಳಿದೆ. ನಾವು ಯಾವುದೇ ರೀತಿಯ ಸವಾಲು ಎದುರಿಸಲು ಸಿದ್ಧರಿದ್ದೇವೆ. ಆದರೆ ಅದಕ್ಕೆ ತಕ್ಕ ಯುದ್ಧೋಪಕರಣಗಳೂ ಕೂಡ ಇರಬೇಕು ಎಂದು ಹೇಳಿದೆ.
ಒಟ್ಟಾರೆ ಸ್ಥಾಯಿ ಸಮಿತಿಗೆ ಸೇನೆ ಬರೆದಿರುವ ಸುಧೀರ್ಘ ಪತ್ರ ಭಾರತೀಯ ಸೇನೆ ಆಂತರ್ಯವನ್ನು ತೆರೆದಿಟ್ಟಿದ್ದು, ಗಡಿಯಲ್ಲಿ ಸವಾರಿ ಮಾಡಲು ಕಾಯುತ್ತಿರುವ ಚೀನಾ ಮತ್ತು ಪಾಕಿಸ್ತಾನಗಳಿಗೆ ಉತ್ತೇಜನ ನೀಡಿದಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com