ಅಧಿಕಾರದ ಲಾಲಸೆಯಲ್ಲಿ ಜವಾಬ್ದಾರಿ ಮರೆಯಬೇಡಿ: ಪ್ರಧಾನಿ ಮೋದಿಗೆ ತೊಗಾಡಿಯ ಕಿವಿಮಾತು

ಅಧಿಕಾರದ ಲಾಲಸೆಯಲ್ಲಿ ಜವಾಬ್ದಾರಿ ಮರೆಯಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾ ಕಿವಿಮಾತು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಅಧಿಕಾರದ ಲಾಲಸೆಯಲ್ಲಿ ಜವಾಬ್ದಾರಿ ಮರೆಯಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾ ಕಿವಿಮಾತು ಹೇಳಿದ್ದಾರೆ.
ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಹಿಂದೂಪರ ಮುಖಂಡ ಪ್ರವೀಣ್ ತೊಗಾಡಿಯಾ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಹಿಂದುತ್ವ ಮತ್ತು ರಾಮಮಂದಿರ ನಿರ್ಮಾಣ ಅಜೆಂಡಾ ಮೇಲೆ ಕೇಂದ್ರದಲ್ಲಿ ಅಧಿಕಾರಕ್ಕೇರಿದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಜವಾಬ್ದಾರಿ ಮರೆತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನೀವು ಹಿಂದೂಗಳಿಗೆ ನೀಡಿದ್ದ ಮಾತನ್ನು ಮರೆತಿದ್ದೀರಿ, ರಾಮಮಂದಿರ ನಿರ್ಮಾಣ ಮತ್ತು ನಾಗರಿಕ ನೀತಿ ಸಂಹಿತೆ ಜಾರಿ ಕುರಿತು ಈ ವರೆಗೂ ಯಾವುದೇ ಆಮೂಲಾಗ್ರ ನಿರ್ಧಾರಗಳು ಸರ್ಕಾರದಿಂದ ಹೊರಬಂದಿಲ್ಲ. ಚುನಾವಣೆಗಳನ್ನು ಗೆಲ್ಲುವುದು ಕೇವಲ ಶೇಕಡಾವಾರು ಮತ ಗಣನೆ, ಮತದಾರರ ಪಟ್ಟಿ ಮತ್ತು ಮತಯಂತ್ರಗಳಷ್ಟೇ.. ಆದರೆ ನೀಡಿದ್ದ ಭರವಸೆಗಳನ್ನೂ ಈಡೇರಿಸುವುದು ಪ್ರಜಾಲಕ್ಷಿ (ನಾಯಕ)ಯ ಗುಣವಾಗಿರುತ್ತದೆ. ನೀವು ನಿಜವಾದ ನಾಯಕ ಎಂಬುದು ನನ್ನ ಭಾವನೆ. ಹೀಗಾಗಿ ನಾನು ನಿಮ್ಮನ್ನು ಕಾಣ ಬಯಸುತ್ತೇನೆ. ನಿಮ್ಮೊಂದಿಗೆ ಸಾಕಷ್ಚು ವಿಚಾರಗಳ ಕುರಿತು ಚರ್ಚಿಸಬೇಕಿದೆ. ದಯಮಾಡಿ ಅಧಿಕಾರದ ಲಾಲಸೆಯಲ್ಲಿ ಜವಾಬ್ದಾರಿ ಮರೆಯಬೇಡಿ, ಅಧಿಕಾರ..ಮತ್ತಷ್ಟು ಅಧಿಕಾರ ಇದು ಜಡತ್ವದ ಪ್ರತೀಕವಾದದೇ ಹೊರತು ದೇಶಕಟ್ಟುವ ಕಾರ್ಯವಲ್ಲ ಎಂದು ತೊಗಾಡಿಯಾ ಹೇಳಿದ್ದಾರೆ.
ಅಂತೆಯೇ ಕಳೆದ 12 ವರ್ಷಗಳಿಂದ ಪ್ರಧಾನಿ ಮೋದಿ ತಮ್ಮನ್ನು ಭೇಟಿ ಮಾಡಿಲ್ಲ ಎಂದು ಹೇಳಿರುವ ತೊಗಾಡಿಯಾ, ಶೀಘ್ರ ಪ್ರಧಾನಿ ಮೋದಿ ತಮ್ಮ ಭೇಟಿಗೆ ಅವಕಾಶ ನೀಡುತ್ತಾರೆ ಎಂಬ ವಿಶ್ವಾಸ ತಮಗಿದೆ. ರಾಮಮಂದಿರ ನಿರ್ಮಾಣವೂ ಸೇರಿದಂತೆ ಹಿಂದೂಗಳಿಗೆ ನೀಡಿರುವ ಭರವಸೆಗಳನ್ನೂ ಈಡೇರಿಸುತ್ತಾರೆ. ವಿವಾದಿತ ಪ್ರದೇಶದಲ್ಲಿ ರಾಮಮಂದಿರ ಬಿಟ್ಟು ಬೇರಾವುದೇ ಕಟ್ಟಡ ನಿರ್ಮಾಣಕ್ಕೆ ಅವಕಾಶ ಬೇಡ. ಮಸೀದಿಯನ್ನು ವಿವಾದಿತ ಪ್ರದೇಶವಲ್ಲದೇ ಇತರೆ ಸ್ಥಳಗಳಲ್ಲಿ ನಿರ್ಮಿಸಬಹುದು. ಇದನ್ನು ಕೇವಲ ಸಂಸತ್ತಿನ ಕಾನೂನಿನ ಮೂಲಕ ಮಾತ್ರ ಮಾಡಬಹುದು. ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತವಿದ್ದು, ಇದರ ನೆರವಿನಿಂದ ರಾಮಮಂದಿರ ಕಾರ್ಯ ನೆರವೇರಿಸಬಹುದು ಎಂದು ತೊಗಾಡಿಯಾ ಹೇಳಿದ್ದಾರೆ.
ಅಂತೆಯೇ ಗೋವಧೆಯನ್ನು ಖಂಡಿಸಿರುವ ತೊಗಾಡಿಯಾ, ಗೋರಕ್ಷಕರ ವಿರುದ್ಧದ ಪ್ರಕರಣಗಳನ್ನು ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ದೇಶಾದ್ಯಂತ ಗೋವಧೆ ನಿಷೇಧ ಸಂಬಂಧ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಬೇಕು. ಮೋದಿ ಸರ್ಕಾರದ ಈ ವರೆಗಿನ ಅವಧಿಯಲ್ಲಿ ಹಿಂದೂಗಳ ಭರವಸೆಗಳು ಈಡೇರಿಲ್ಲ. ಅಂತೆಯೇ ಅಭಿವೃದ್ಧಿಯೂ ಆಗಿಲ್ಲ ಎಂದು ತೊಗಾಡಿಯಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com