

ನವದೆಹಲಿ: ಸಿಬಿಎಸ್ಇ 12ನೇ ತರಗತಿಯ ಅಕೌಂಟೆನ್ಸಿ ಪ್ರಶ್ನೆಪತ್ರಿಕೆ ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿದೆ ಎಂದು ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ, ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆಪತ್ರಿಕೆಗಳಿಗೆ ಸೀಲು ಹಾಕಿಯೇ ತರಲಾಗಿತ್ತು. ಇಂದು ಹಬ್ಬಿರುವ ಸುದ್ದಿ ವದಂತಿಯಷ್ಟೆ ಎಂದು ಕೇಂದ್ರ ಪ್ರೌಢಶಿಕ್ಷಣ ಮಂಡಳಿ ಸ್ಪಷ್ಟಪಡಿಸಿದೆ.
ಇಂದು ಪರೀಕ್ಷೆ ನಡೆಯುತ್ತಿದ್ದ ವೇಳೆ ಸ್ಥಳೀಯ ಮಟ್ಟದಲ್ಲಿ ಕೆಲವು ದುಷ್ಕರ್ಮಿಗಳು ಬೇಕೆಂದೇ ವಾಟ್ಸಾಪ್ ಮತ್ತು ಇತರ ಸೋಷಿಯಲ್ ಮೀಡಿಯಾಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ, ಈ ಮೂಲಕ ಪರೀಕ್ಷೆ ಸುಗಮವಾಗಿ ಸಾಗಲು ತೊಂದರೆಯನ್ನುಂಟುಮಾಡಿದ್ದಾರೆ. ಅಂತವರು ಯಾರು ಎಂದು ಪತ್ತೆಮಾಡಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಿಬಿಎಸ್ಇ ಮುಂದಾಗಿದ್ದು ಈಗಾಗಲೇ ಈ ಸಂಬಂಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಹೇಳಿದೆ.
ಇದಕ್ಕೂ ಮುನ್ನ ಪ್ರಶ್ನೆಪತ್ರಿಕೆ ಸೋರಿಕೆ ವದಂತಿಗೆ ಸಂಬಂಧಪಟ್ಟಂತೆ ತನಿಖೆಗೆ ದೆಹಲಿ ಉಪ ಮುಖ್ಯಮಂತ್ರಿ ತನಿಖೆಗೆ ಆದೇಶಿಸಿದ್ದರು.
''12ನೇ ತರಗತಿಯ ಅಕೌಂಟೆನ್ಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ದೂರು ಬಂದಿದೆ. ಈ ಸಂಬಂಧ ಶಿಕ್ಷಣ ಇಲಾಖೆಯ ನಿರ್ದೇಶಕರ ಕಚೇರಿಯ ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ಆದೇಶಿಸಿದ್ದೇನೆ ಮತ್ತು ಸಿಬಿಎಸ್ಇಯಲ್ಲಿ ದೂರು ಸಲ್ಲಿಸಲು ಸೂಚಿಸಿರುವುದಾಗಿ ಉಪ ಮುಖ್ಯಮಂತ್ರಿ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಕಷ್ಟಪಟ್ಟು ಪರೀಕ್ಷೆಗೆ ತಯಾರಾದ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದರಿಂದ ಸಿಬಿಎಸ್ಐಯ ಬೇಜವಾಬ್ದಾರಿ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಸಚಿವರು ಆದೇಶಿಸಿದ್ದರು.