ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಂಬರಕರ್ ಶ್ರೀರಾಮ್ ದಿಂಕರ್ ಅವರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಅದೃಷ್ಟ ವಶಾತ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಶೋಪಿಯಾನ್ ಜಿಲ್ಲೆಯ ಹಜಿಪೊರಾ ಪ್ರದೇಶದಲ್ಲಿ ದಿಂಕರ್ ಅವರು ಪ್ರಯಾಣಿಸುತ್ತಿದ್ದ ಗುಂಡು ನಿರೋಧಕ ವಾಹನದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿಯ ಭದ್ರತಾ ಸಿಬ್ಬಂದಿ ಸಹ ಪ್ರತಿ ದಾಳಿ ನಡೆಸಿದ್ದು, ಕೆಲ ನಿಮಿಷಗಳ ಕಾಲ ಉಗ್ರರ ಮತ್ತು ಪೊಲೀಸರ ನಡುವೆ ಗುಂಡಿನ ಕಾಳಗ ನಡೆದಿದೆ.
ದಾಳಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅಪಾಯದಿಂದ ಪಾರಾಗಿದ್ದು, ತಪ್ಪಿಸಿಕೊಂಡಿರುವ ಉಗ್ರರಿಗಾಗಿ ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಉಗ್ರರು ಬೆಟ್ಟ ಪ್ರದೇಶದಿಂದ ತಮ್ಮ ಗುಂಡು ನಿರೋಧಕ ವಾಹನದಲ್ಲಿ ಮೇಲೆ ದಾಳಿ ನಡೆಸಿದ್ದು, ವಾಹನದ ಕಿಟಕಿಯ ಗ್ಲಾಸ್ ಗೆ ಕೆಲ ಗುಂಡು ತಗುಲಿವೆ. ಆದರೂ ತಾವು ಸುರಕ್ಷಿತವಾಗಿರುವುದಾಗಿ ದಿಂಕರ್ ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.