ಭೀಮಾ ಕೋರೆಗಾಂವ್ ಕೇಸ್ :ನ್ಯಾಯಾಲಯ ಆವರಣದಲ್ಲಿ ಸಮಸ್ತ ಹಿಂದಿ ಅಘಾಡಿ ಕಾರ್ಯಕಾರಿ ಅಧ್ಯಕ್ಷ ಮಿಲಿಂದ್ ಎಕ್ ಬೊಟೆ ಮೇಲೆ ದಾಳಿ
ಮುಂಬೈ : ಭೀಮಾ ಕೋರೆಗಾಂವ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ಬಂಧಿಸಲಾಗಿರುವ ಸಮಸ್ತ ಹಿಂದಿ ಅಘಾಡಿ ಕಾರ್ಯಕಾರಿ ಅಧ್ಯಕ್ಷ ಮಿಲಿಂದ್ ಎಕ್ ಬೊಟೆ ಮೇಲೆ ಇಂದು ಪುಣೆ ನ್ಯಾಯಾಲಯದ ಆವರಣದಲ್ಲಿ ವಿವಿಧ ದಲಿತಪರ ಸಂಘಟನೆಗಳು ದಾಳಿ ನಡೆಸಿವೆ.
ಮಿಲಿಂದ್ ಎಕ್ ಬೊಟೆ ಮುಖಕ್ಕೆ ಕಪ್ಪುಮಸಿ ಬಳಿಯಲು ಯತ್ನಿಸಲಾಯಿತು. ಆದರೆ, ಆತನನ್ನು ಸುರಕ್ಷಿತವಾಗಿ ಕರೆದೊಯ್ಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಭೀಮಾ ಕೋರೆಂಗಾವ್ ಗಲಭೆಗೆ ಸಂಬಂಧಿಸಿದಂತೆ ಮಿಲಿಂದ್ ಎಕ್ ಬೊಟೆಯನ್ನು ಕಳೆದ ಬುಧವಾರ ಬಂಧಿಸಿದ್ದು, ಮಾರ್ಚ್ 21ರವರೆಗೂ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣ ಸಂಬಂಧ ವಿಚಾರಣೆಗಾಗಿ ಇಂದು ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದಾಗ ದಾಳಿ ನಡೆಸಲಾಗಿದೆ ಎಂದು ತಿಳಿಸಿರುವ ಪೊಲೀಸರು, ಪೊಲೀಸ್ ಕಸ್ಟಡಿಯನ್ನು ಎರಡು ದಿನ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ.
ಈ ಮಧ್ಯೆ ಸಾಂಗ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮತ್ತೋರ್ವ ಆರೋಪಿ, ಸಾಂಬಾಜಿ ಭಿಡೆ, ಭೀಮಾ ಕೋರೆಗಾಂವ್ ಗಲಭೆಗೂ ಮುನ್ನ ಪುಣೆಯಲ್ಲಿನ ಈಲ್ಗರ್ ಪರಿಷದ್ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು.
ಜನವರಿ 1ರಂದು ಪುಣೆಯ ಭೀಮಾ ಕೋರೆಗಾಂವ್ ವಿಜಯೋತ್ಸಾವ ಆಚರಣೆ ವೇಳೆ ಕಲ್ಲುತೂರಾಟ ನಡೆದು ಉಂಟಾದ ಗಲಭೆಯಲ್ಲಿ ಒಬ್ಬರು ಸಾವಿಗೀಡಾಗಿದ್ದರು.
ಈ ಗಲಭೆಗೆ ಎಕ್ ಬೊಟೆ ಹಾಗೂ ಬಿಡೆ ಪ್ರಚೋದನೆಯೇ ಕಾರಣ ಎಂದು ಬಿಬಿಎಂಎಸ್ ನಾಯಕ ಪ್ರಕಾಶ್ ಅಂಬೇಡ್ಕರ್ ಆರೋಪಿಸಿ ಮಹಾರಾಷ್ಟ್ರದಲ್ಲಿಎಡ ಹಾಗೂ ದಲಿತ ಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ಕೂಡಾ ಇದರಲ್ಲಿ ಪಾಲ್ಗೊಂಡಿದ್ದರು.
ಈ ಮಧ್ಯೆ ಈ ತಿಂಗಳ 26 ರೊಳಗೆ ಭಿಡೆಯನ್ನು ಬಂಧಿಸದಿದ್ದರೆ ಮಹಾರಾಷ್ಟ್ರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಕಾಶ್ ಅಂಬೇಡ್ಕರ್ ಇತ್ತೀಚಿಗೆ ಎಚ್ಚರಿಕೆ ನೀಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ