ಮುಂಬೈ: ಕೇಂದ್ರ ಸರ್ಕಾರವನ್ನು ಯಾರೂ ಅಲುಗಾಡಿಸುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ತೆಲುಗು ದೇಶಂ ಪಕ್ಷದ ಅವಿಶ್ವಾಸ ನಿರ್ಣಯ ಸುಳ್ಳು ಮಾಡಿದೆ ಎಂದು ಶಿವಸೇನೆ ಹೇಳಿದೆ.
25 ವರ್ಷಗಳ ವರೆಗೆ ಬಿಜೆಪಿ ನೇತೃತ್ವದ ಸರ್ಕಾರವನ್ನು ಕೇಂದ್ರದಲ್ಲಿ ಅಲುಗಾಡಿಸಲು ಸಾಧ್ಯವಿಲ್ಲ ಎಂಬ ತಿಳುವಳಿಕೆ ಇತ್ತು, ಆದರೆ ಟಿಡಿಪಿ ಕೇಂದ್ರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ ಆ ತಿಳುವಳಿಕೆ ತಪ್ಪು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದೆ ಎಂದು ಸಾಮ್ನಾದ ಲೇಖನದಲ್ಲಿ ಅಭಿಪ್ರಾಯಪಟ್ಟಿದೆ.
ಇದೇ ವೇಳೆ ಟಿಡಿಪಿಯ ನಡೆಯನ್ನೂ ವಿಶ್ಲೇಷಿಸಿರುವ ಶಿವಸೇನೆ, ಟಿಡಿಪಿ ತನ್ನದೇ ಆದ ರಾಜಕೀಯ ಅನಿವಾರ್ಯತೆಗಳಿಗಾಗಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದೆ. ಆದರೆ ಎನ್ ಡಿಎ ಗೆ ಬಹುಮತವಿದ್ದು ಅವಿಶ್ವಾಸ ನಿರ್ಣಯ ನಿರರ್ಥಕವಾಗಲಿದೆ ಎಂದು ಶಿವಸೇನೆ ಹೇಳಿದೆ.
ಕೇಂದ್ರ ಸರ್ಕಾರದ ವಿರುದ್ಧ ವಿಶ್ವಾಸ ಕಡಿಮೆಯಾಗುತ್ತಿದೆ, ಮುಂದಿನ ವರ್ಷದ ಚುನಾವಣೆಯಲ್ಲಿ ಇದು ತಿಳಿಯಲಿದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದಿರುವ ಲೇಖನದಲ್ಲಿ ತಿಳಿಸಿದೆ.