ಕುಪ್ವಾರ ಎನ್ ಕೌಂಟರ್: 4 ಭದ್ರತಾ ಸಿಬ್ಬಂದಿ ಹುತಾತ್ಮ, ಐದು ಉಗ್ರರು ಹತ

ಕಾಶ್ಮೀರದಲ್ಲಿ ಕಳೆದ ರಾತ್ರಿಯಿಂದ ನಡೆಯುತ್ತಿದ್ದ ಉಗ್ರ ನಿಗ್ರಹ ಕಾರ್ಯಾಚರಣೆ ಅಂತ್ಯವಾಗಿದ್ದು, ಉಗ್ರ ದಾಳಿಯಲ್ಲಿ ಈ ವರೆಗೂ ಒಟ್ಟು 4 ಮಂದಿ ಭದ್ರತಾ ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ. ಅಂತೆಯೇ 5 ಮಂದಿ ಉಗ್ರರನ್ನು ಹೊಡೆದುರುಳಿಸುವಲ್ಲಿ ಸೇನೆ ಯಶಸ್ವಿಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ರಾತ್ರಿಯಿಂದ ನಡೆಯುತ್ತಿದ್ದ ಉಗ್ರ ನಿಗ್ರಹ ಕಾರ್ಯಾಚರಣೆ ಅಂತ್ಯವಾಗಿದ್ದು, ಉಗ್ರ ದಾಳಿಯಲ್ಲಿ ಈ ವರೆಗೂ ಒಟ್ಟು 4 ಮಂದಿ ಭದ್ರತಾ ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ. ಅಂತೆಯೇ 5 ಮಂದಿ ಉಗ್ರರನ್ನು ಹೊಡೆದುರುಳಿಸುವಲ್ಲಿ ಸೇನೆ ಯಶಸ್ವಿಯಾಗಿದೆ.
ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಲ್ಮತ್ ಪೋರಾ ಎಂಬಲ್ಲಿ ಉಗ್ರರು ದಾಳಿ ನಡೆಸಿದ್ದು, ಈ ವೇಳೆ ಸೈನಿಕರು ಪ್ರತಿದಾಳಿ ನಡೆಸಿದ್ದಾರೆ. ಸೈನಿಕರ ಬೆಂಗಾವಲು ವಾಹನಗಳನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದು, ಈ ವೇಳೆ ಇಬ್ಬರು ಸೈನಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಕೂಡಲೇ ಸೈನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಈ ಪೈಕಿ ಇಂದು ಇಬ್ಬರು ಸೈನಿಕರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಸಾವನ್ನಪ್ಪಿದ ನಾಲ್ಕು ಭದ್ರತಾ ಸಿಬ್ಬಂದಿಗಳ ಪೈಕಿ ಇಬ್ಬರು ಜಮ್ಮು ಮತ್ತು ಕಾಶ್ಮೀರ ಪೊಲೀಸರಾಗಿದ್ದು, ಇಬ್ಬರು ಸಿಆರ್ ಪಿಎಫ್ ಯೋಧರೆಂದು ತಿಳಿದುಬಂದಿದೆ.
ಅಂತೆಯೇ ಕಾರ್ಯಾಚರಣೆಯಲ್ಲಿ ಈ ವರೆಗೂ ನಾಲ್ಕು ಮಂದಿ ಉಗ್ರರನ್ನು ಸದೆಬಡಿಯುವಲ್ಲಿ ಸೇನೆ ಯಶಸ್ವಿಯಾಗಿದ್ದು, ಇಂದು ಮತ್ತೆ ಓರ್ವ ಉಗ್ರನನ್ನು ಸೇನಾಪಡೆಗಳು ಹೊಡೆದುರುಳಿಸಿವೆ. ಆ ಮೂಲಕ ಈ ಕಾರ್ಯಾಚರಣೆಯಲ್ಲಿ ಒಟ್ಟು 5 ಮಂದಿ ಉಗ್ರರನ್ನು ಸೇನಾಪಡೆಗಳು ನೆಲಕ್ಕುರುಳಿಸಿದಂತಾಗಿದೆ.
ಪ್ರಸ್ತುತ ನಾಲ್ಕು ಉಗ್ರರ ಶವಗಳನ್ನು ಸೇನಾಪಡೆಗಳು ವಶಕ್ಕೆ ಪಡೆದಿದ್ದು, ಎನ್ ಕೌಂಟರ್ ಕಾರ್ಯಾಚರಣೆ ಅಂತ್ಯವಾಗಿದೆ. ಘಟನಾ ಸ್ಥಳದಲ್ಲಿ ಸೇನಾಪಡೆಗಳು ಪ್ರಸ್ತುತ ಶೋಧ ಕಾರ್ಯ ಆರಂಭಿಸಿವೆ ಎಂದು ಜಮ್ಮು ಮತ್ತು ಕಾಶ್ಮೀರ ಡಿಜಿಪಿ ಶೇಷ್ ಪಾಲ್ ವೈದ್ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com