ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ ಎಲ್ಲ ಸಿಸಿಟಿವಿ ಬಂದ್​ ಆಗಿದ್ದವು: ಅಪೊಲೊ ಆಸ್ಪತ್ರೆ

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜೆ ಜಯಲಲಿತಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ....
ಜಯಲಲಿತಾ
ಜಯಲಲಿತಾ
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜೆ ಜಯಲಲಿತಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆಸ್ಪತ್ರೆಯ ಎಲ್ಲ ಸಿಸಿಟಿವಿ ಕ್ಯಾಮೆರಾಗಳನ್ನು ಬಂದ್ ಮಾಡಲಾಗಿತ್ತು ಎಂದು ಅಪೊಲೊ ಆಸ್ಪತ್ರೆಯ ಅಧ್ಯಕ್ಷ ಪ್ರತಾಪ್ ರೆಡ್ಡಿ ಅವರು ಗುರುವಾರ ಹೇಳಿದ್ದಾರೆ.
ಜಯಲಲಿತಾ ಅವರಿಗೆ ಚಿಕಿತ್ಸೆ ನೀಡುವುದನ್ನು ಎಲ್ಲರೂ ನೋಡಬಾರದು ಎಂಬ ಉದ್ದೇಶದಿಂದ ಅವರು ದಾಖಲಾದ ದಿನದಿಂದ  2016 ಡಿ. 5ರಂದು ಕೊನೆಯುಸಿರೆಳೆಯುವವರೆಗಿನ 75 ದಿನಗಳ ಕಾಲವೂ ಅಪೋಲೊ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳನ್ನು ಬಂದ್​ ಮಾಡಿರುವುದು ದುರದೃಷ್ಟಕರ ಎಂದು ರೆಡ್ಡಿ ವರದಿಗಾರರಿಗೆ ತಿಳಿಸಿದ್ದಾರೆ.
ಇಂದು ಅಪೋಲೊ ಇಂಟರ್​ ನ್ಯಾಷನಲ್​ ಕೊಲೊರೆಕ್ಟಲ್​ ಸಿನಾಪ್ಸಿಸಮ್ 2018 ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ಮುಖ್ಯಮಂತ್ರಿಗಳನ್ನು ಆಸ್ಪತ್ರೆಗೆ ಕರೆತಂದಾಗ ಗಂಭೀರ ಸ್ಥಿತಿಯಲ್ಲಿದ್ದರು. ಆದರೆ ಚಿಕಿತ್ಸೆಯ ನಂತರ ಅವರು ಚೇತರಿಸಿಕೊಂಡಿದ್ದರು. ಡಿಸೆಂಬರ್ 4ರಂದು ಅವರಿಗೆ ಹೃದಯಾಘಾತವಾಗಿತ್ತು. ಅದರ ಮರುದಿನ ಅವರ ಸಾವಿನ ಸುದ್ದಿ ಪ್ರಕಟಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಜಯಾ ಸಾವಿನ ಕುರಿತು ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಎ ಆರ್ಮುಗಸ್ವಾಮಿ ಆಯೋಗದ ಎದುರು ಹಾಜರುಪಡಿಸಲಾಗಿದೆಯೇ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕ್ಷಮಿಸಿ, ಆ ವೇಳೆ ತೀವ್ರ ನಿಗಾ ಘಟಕದ(ಐಸಿಯು) ಎಲ್ಲ ಸಿಸಿಟಿವಿ ಕ್ಯಾಮೆರಾಗಳನ್ನೂ ಬಂದ್​ ಮಾಡಲಾಗಿತ್ತು. ಅಲ್ಲಿಂದ ಅವರು ಕೊನೆಯುಸಿಳೆಯುವವರೆಗೆ ಕ್ಯಾಮೆರಗಳು ಬಂದ್​ ಆಗಿಯೇ ಇದ್ದವು. ಜಯಲಲಿತಾ ಅವರು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರುತ್ತಲೇ ಅವರನ್ನು ಐಸಿಯುನಲ್ಲಿ ಇರಲಿಸಲಾಯಿತು. ಘಟಕವನ್ನು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಯಿತು. 24 ಹಾಸಿಗೆಗಳ ಆ ಘಟಕದಲ್ಲಿ ಜಯಲಲಿತಾ ಅವರಿಗೆ ಮಾತ್ರವೇ ಚಿಕಿತ್ಸೆ ನೀಡಲಾಗುತ್ತಿತ್ತು. ಮಿಕ್ಕ ರೋಗಿಗಳನ್ನು ಪಕ್ಕದ ಘಟಕಕ್ಕೆ ಸ್ಥಳಾಂತರಿಸಲಾಯಿತು. ಹಾಗಾಗಿ ಅವರು ಸಿಸಿಟಿವಿ ಕ್ಯಾಮೆರಾಗಳನ್ನು ಬಂದ್​ ಮಾಡಿಸಿದರು. ಯಾರು ಅವರನ್ನು ನೋಡಬಾರದು ಎಂಬ ಕಾರಣಕ್ಕೆ ಹೀಗೆ ಮಾಡಲಾಗಿತ್ತು. ಈ ಎಲ್ಲ ವಿಚಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಆಸ್ಪತ್ರೆ ವತಿಯಿಂದ ಆರ್ಮುಗಸ್ವಾಮಿ ಆಯೋಗದ ಎದುರು ಹಾಜರುಪಡಿಸಲಾಗಿದೆ ಎಂದು ರೆಡ್ಡಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com