ರಾಹುಲ್ 'ಗಬ್ಬರ್ ಸಿಂಗ್ ಟ್ಯಾಕ್ಸ್' ಟೀಕೆಯ ಹಿಂದೆ ಕೇಂಬ್ರಿಡ್ಜ್ ಅನಲಿಟಿಕಾ ಕೈವಾಡ!

ಜಿಎಸ್ ಟಿ ಕುರಿತು ಕಾಂಗ್ರಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿದ್ದ ಗಬ್ಬರ್ ಸಿಂಗ್ ಟ್ಯಾಕ್ಸ್ ಟೀಕೆಯ ಹಿಂದೆ ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆಯ ಕೈವಾಡವಿದೆ ಎಂದು ಹೇಳಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಜಿಎಸ್ ಟಿ ಕುರಿತು ಕಾಂಗ್ರಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿದ್ದ ಗಬ್ಬರ್ ಸಿಂಗ್ ಟ್ಯಾಕ್ಸ್ ಟೀಕೆಯ ಹಿಂದೆ ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆಯ ಕೈವಾಡವಿದೆ ಎಂದು ಹೇಳಲಾಗಿದೆ.
ಬ್ರಿಟನ್ ಮೂಲದ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಯ ಫೇಸ್ ಬುಕ್ ದತ್ತಾಂಶ ಹಗರಣ ಬಯಲಾದ ಬೆನ್ನಲ್ಲೇ ಭಾರತದಲ್ಲಿ ಶುರುವಾದ ಬಿಜೆಪಿ, ಕಾಂಗ್ರೆಸ್‌ ನಡುವಿನ ವಾಕ್ಸಮರ ಗುರುವಾರವೂ ಮುಂದುವರಿದಿದೆ. ಗುರುವಾರ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರ ವಿರುದ್ಧ ಮತ್ತಷ್ಟು ಆರೋಪಗಳನ್ನು ಮಾಡಿದರು. ಗುಜರಾತ್‌ ಚುನಾವಣೆ ವೇಳೆ ರಾಹುಲ್‌ ಗಾಂಧಿ ಬಳಸಿದ್ದ 'ಗಬ್ಬರ್‌ ಸಿಂಗ್‌ ಟ್ಯಾಕ್ಸ್‌' (ಜಿಎಸ್‌ಟಿ ಬಗ್ಗೆ), 'ವಿಕಾಸ್‌ ಗಾನ್‌ ಕ್ರೇಜಿ' (ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಬಗ್ಗೆ) ಎಂಬ ಟೀಕಾಸ್ತ್ರಗಳ ಹಿಂದೆ ಅನಾಲಿಟಿಕಾ ಸಂಸ್ಥೆಯ ಕೈವಾಡವಿತ್ತು ಎಂದು ಅವರು ಆರೋಪಿಸಿದರು.  
ಅಲ್ಲದೆ ಇದಕ್ಕೂ ಮೊದಲು ಅಂದರೆ ಬುಧವಾರದ ತಮ್ಮ ಸುದ್ದಿಗೋಷ್ಠಿಯಲ್ಲೇ, ಅನಾಲಿಟಿಕಾ ಹಾಗೂ ಕಾಂಗ್ರೆಸ್‌ ನಡುವಿನ ನಂಟಿನ ಬಗ್ಗೆ ಸಚಿವರು ಆರೋಪಿಸಿದ್ದ ಹಿನ್ನೆಲೆಯಲ್ಲಿ ಟ್ವಿಟರ್‌ ಮೂಲಕ ಪ್ರತ್ಯುತ್ತರ ಕೊಟ್ಟಿದ್ದ ರಾಹುಲ್‌ ಗಾಂಧಿ, ಇರಾಕ್‌ ನಲ್ಲಿ 39 ಭಾರತೀಯರು ಹತ್ಯೆಯಾಗಿದ್ದನ್ನು ಮುಚ್ಚಿದ್ದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದಕ್ಕಾಗಿ, ಜನರ ಗಮನ ಬೇರೆಡೆಗೆ ಸೆಳೆಯಲು ಮೋದಿ ಸರ್ಕಾರ  ಈಗ ಅನಲಿಟಿಕಾ ವಿವಾದವನ್ನು ಕೈಗೆತ್ತಿಕೊಂಡಿದೆ ಎಂದು ಆರೋಪಿಸಿದ್ದರು.
ಇದೇ ವೇಳೆ, ರಾಹುಲ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಸಚಿವರ ರವಿಶಂಕರ್ ಪ್ರಸಾದ್ ಅವರು, "ಕಾಂಗ್ರೆಸ್‌, ಸಾವಿನಲ್ಲೂ ರಾಜಕೀಯ ಮಾಡುತ್ತಿದೆ'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, "ಇರಾಕ್‌ನಲ್ಲಿ ಹತ್ಯೆಯಾದ ಭಾರತೀಯರ ಮೃತದೇಹಗಳ ಬಗ್ಗೆ ದಯವಿಟ್ಟು ರಾಜಕಾರಣ ಮಾಡಬಾರದು ಎಂದು ರಾಹುಲ್‌ ಅವರಲ್ಲಿ ಕೇಳಿಕೊಳ್ಳುತ್ತೇನೆ'' ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com