
ನವದೆಹಲಿ : ನ್ಯಾಯಾಲಯದಲ್ಲಿ ಇತ್ಯರ್ಥಗೊಳ್ಳದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು , ನ್ಯಾಯಾಧೀಶರ ಕೊರತೆ ಎದ್ದು ಕಾಣುತ್ತಿದೆ. ಈ ವಿಚಾರದಲ್ಲಿ ನಕಲಿ ಸುದ್ದಿಗಳನ್ನು ಹುಟ್ಟುಹಾಕಲಾಗುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾನೂನು ಸಚಿವ ರವಿಶಂಕರ್ ಪ್ರಸಾದ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಫೇಸ್ ಬುಕ್ ನಲ್ಲಿನ ಮಾಹಿತಿ ದುರ್ಬಳಕೆ ಕುರಿತಂತೆ ರವಿಶಂಕರ್ ಪ್ರಸಾದ್ ಕಾಂಗ್ರೆಸ್ ವಿರುದ್ಧ ಮಾಡಿದ್ದ ಟೀಕೆ ನಂತರ ರಾಹುಲ್ ಗಾಂಧಿ ವಾಕ್ ಪ್ರಹಾರ ನಡೆಸಿದ್ದು, ನ್ಯಾಯಾಲಯದಲ್ಲಿನ ಇತ್ಯರ್ಥಗೊಳ್ಳದ ಪ್ರಕರಣಗಳಿಂದಾಗಿ ಕಾನೂನು ಸುವ್ಯವಸ್ಥೆ ಕುಸಿತಗೊಂಡಿದೆ ಎಂದು ಆರೋಪಿಸಿದ್ದಾರೆ.
ಸುಪ್ರೀಂಕೋರ್ಟಿನಲ್ಲಿ 50 ಸಾವಿರ , ಹೈಕೋರ್ಟ್ ನಲ್ಲಿ 37 ಲಕ್ಷ, ಅಧೀನ ನ್ಯಾಯಾಲಯದಲ್ಲಿ 2.6 ಕೋಟಿಗೂ ಹೆಚ್ಚು ಪ್ರಕರಣಗಳು ಇತ್ಯರ್ಥಗೊಳ್ಳದಿರುವುದು ದಿಗ್ಬ್ರಮೆ ಮೂಡಿಸಿದೆ. ಹೈಕೋರ್ಟ್ ನಲ್ಲಿ 400, ಅಧೀನ ನ್ಯಾಯಾಲಯದಲ್ಲಿ 6 ಸಾವಿರ ನ್ಯಾಯಾಧೀಶರ ನೇಮಕಗೊಳಿಸಿಲ್ಲ, ಹೀಗಿದ್ದರೂ ಕಾನೂನು ಸಚಿವರು ನಕಲಿ ಸುದ್ದಿ ಹುಟ್ಟುಹಾಕುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇಮಕ ವಿಚಾರದಲ್ಲೂ ಪ್ರಧಾನಮಂತ್ರಿ ನರೇಂದ್ರಮೋದಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
Advertisement