ಅಮೆರಿಕಾಗೆ 'ನಮೋ' ಆ್ಯಪ್ ಬಳಕೆದಾರರ ಮಾಹಿತಿ ರವಾನೆ: ರಾಹುಲ್ ಗಾಂಧಿ ಆರೋಪ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಮೋ ಆ್ಯಪ್‌ ಮೂಲಕ ಭಾರತೀಯ ಬಳಕೆದಾರರ ಗೌಪ್ಯ ಮಾಹಿತಿಯನ್ನು ಅಮೆರಿಕದ ಕಂಪನಿಗಳ ಜೊತೆ ಹಂಚಿಕೊಂಡಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಮೋ ಆ್ಯಪ್‌ ಮೂಲಕ ಭಾರತೀಯ ಬಳಕೆದಾರರ ಗೌಪ್ಯ ಮಾಹಿತಿಯನ್ನು ಅಮೆರಿಕದ ಕಂಪನಿಗಳ ಜೊತೆ ಹಂಚಿಕೊಂಡಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ
ಈ  ಬಗ್ಗೆ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 'ಹಾಯ್‌! ನನ್ನ ಹೆಸರು ನರೇಂದ್ರ ಮೋದಿ. ನಾನು ಭಾರತದ ಪ್ರಧಾನಮಂತ್ರಿ. ನೀವು ನನ್ನ ಅಧಿಕೃತ ಆ್ಯಪ್‌ಗೆ ಲಾಗಿನ್‌ ಆದರೆ ನಾನು ನಿಮ್ಮ ಎಲ್ಲಾ ಮಾಹಿತಿಯನ್ನು ಅಮೆರಿಕದ ಕಂಪನಿಗಳ ಸ್ನೇಹಿತರಿಗೆ ನೀಡುತ್ತೇನೆ’ ಎಂದು ವ್ಯಂಗ್ಯ ಮಾಡಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ನಮೋ ಆ್ಯಪ್ ರಹಸ್ಯವಾಗಿ ಆಡಿಯೋ, ವಿಡಿಯೋ, ಮೊಬೈಲ್ ಕಾಂಟಾಕ್ಟ್ ಗಳು, ಕುಟುಂಬ ಮತ್ತು ಸ್ನೇಹಿತರ ಮಾಹಿತಿಗಳನ್ನು ಸಂಗ್ರಹಿಸಿ ವಿದೇಶಕ್ಕ ರವಾನೆ ಮಾಡುತ್ತಿದೆ. ನಮೋ ಆ್ಯಪ್‌ ಬಳಕೆದಾರರ ಹೆಸರು, ಇ–ಮೇಲ್‌ ವಿಳಾಸ, ಫೋಟೊ ಮುಂತಾದ ಮಾಹಿತಿಯನ್ನು ಅವರ ಅನುಮತಿ ಇಲ್ಲದೆಯೇ ಬೇರೊಂದು ಸಂಸ್ಥೆಗೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಮೋದಿ ಮೊಬೈಲ್‌ ಆ್ಯಪ್‌ನ ವೈಯಕ್ತಿಕ ದತ್ತಾಂಶಗಳಾದ ಇಮೇಲ್‌ ಐಡಿ, ಫೋಟೋಗಳು, ಲಿಂಗ ಮತ್ತು ಬಳಕೆದಾರರ ಹೆಸರುಗಳನ್ನು ಮೂರನೇ ವ್ಯಕ್ತಿಯೊಬ್ಬರಿಗೆ ಕಳುಹಿಸಲಾಗಿದೆ ಎಂದು ಫಾನ್ಸ್‌ ಮೂಲದ ಹ್ಯಾಕರ್‌ವೊಬ್ಬರು ಸರಣಿ ಟ್ವೀಟ್‌ಗಳ ಮೂಲಕ ಆರೋಪಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಯನ್ನು ರಾಹುಲ್‌ ಬಹಿರಂಗಪಡಿಸಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್‌, ಕೇಂಬ್ರಿಜ್‌ ಅನಾಲಿಟಿಕಾ ಕಂಪನಿಯನ್ನು ಬಳಸಿಕೊಂಡಿದೆ ಎಂದು ಬಿಜೆಪಿ ಆರೋಪಿಸಿದ ಬೆನ್ನಲ್ಲೇ, ರಾಹುಲ್‌ ಹೇಳಿಕೆ ಹೊರಬಿದ್ದಿದೆ. ಭಾರತೀಯರ ಮೇಲೆ ಗೂಢಚಾರಿಗೆ ನಡೆಸುವವರಿಗೆ ಮೋದಿ ಬಿಗ್ ಬಾಸ್ ಆಗಿದ್ದು, ಮೋದಿ ಆ್ಯಪ್ ಜಿಪಿಎಸ್ ಲೊಕೇಶ್ ಟ್ರಾಕ್ ಮಾಡುತ್ತದೆ.  ಈಗ ಪ್ರಧಾನಿ ಮೋದಿಗೆ ನಮ್ಮ ಮಕ್ಕಳ ದತ್ತಾಂಶ ಕೂಡ ಬೇಕಿದ್ದು, ದೇಶದ ಸುಮಾರು 13 ಲಕ್ಷ ಎನ್ ಸಿಸಿ ಕೆಡೆಟ್ ಗಳು ಕಡ್ಡಾಯವಾಗಿ ನಮೋ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮತ್ತೊಂದು ಪ್ರಮುಖ ಸುದ್ದಿ ಹೂತು ಹಾಕಿದ್ದೀರಿ, ಧನ್ಯವಾದ: ಮಾಧ್ಯಮಗಳ ವಿರುದ್ಧ ರಾಹುಲ್ ಕಿಡಿ
ಇದೇ ವೇಳೆ ಭಾರತೀಯ ಮಾಧ್ಯಮಗಳ ವಿರುದ್ಧವೂ ಕಿಡಿಕಾರಿರುವ ರಾಹುಲ್ ಗಾಂಧಿ, ನಮೋ ಆ್ಯಪ್‌ ಮೂಲಕ ದತ್ತಾಂಶ ಸೋರಿಕೆಯ ಸುದ್ದಿಯನ್ನು ಸರಿಯಾಗಿ ತೆಗೆದುಕೊಂಡಿಲ್ಲ ಎಂದು ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಎಂದಿನಂತೆಯೇ, ಮತ್ತೊಂದು ಮಹತ್ವದ ಸುದ್ದಿಯನ್ನು ಹೂತು ಹಾಕುವ ಮೂಲಕ ದೊಡ್ಡ ಕೆಲಸ ಮಾಡಿದ್ದೀರಿ. ಮುಖ್ಯ ವಾಹಿನಿಯ ಮಾಧ್ಯಮಕ್ಕೆ ಧನ್ಯವಾದ’ ಎಂದು ರಾಹುಲ್‌ ವ್ಯಂಗ್ಯವಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com